ಇಳಕಲ್ : ‘ಪರಿಶಿಷ್ಟರು ಸೇರಿದಂತೆ ವಿವಿಧ ಭಕ್ತ ವರ್ಗದವರಿಗೆ ದೀಕ್ಷೆ ನೀಡಿ ಮಠಾಧೀಶರನ್ನಾಗಿ ಮಾಡುವ ಧೈರ್ಯವನ್ನು ಪಂಚಪೀಠಗಳು ಸೇರಿದಂತೆ ನಾಡಿನ ಪ್ರಮುಖ ಮಠಗಳು ಮಾಡಬೇಕು. ಇಂತಹ ಮಹತ್ಕಾರ್ಯ ಮಾಡಿದ ಶ್ರೇಯಸ್ಸು ಮಹಾಂತ ಶ್ರೀಗಳಿಗೆ ಸಲ್ಲುತ್ತದೆ’ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
ಅವರು ಇಲ್ಲಿಯ ವಿಜಯ ಮಹಾಂತೇಶ್ವರ ಸಂಸ್ಥಾನಮಠದಲ್ಲಿ ಗುರುವಾರ ಮಹಾಂತ ಶ್ರೀಗಳ ಜನ್ಮದಿನದ ನಿಮಿತ್ತ ನಡೆದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಗೌರಿಗದ್ದೆಯ ಗಾಂಧಿ ಸೇವಾ ಟ್ರಸ್ಟನ ವಿನಯ ಗುರೂಜಿ ಮಾತನಾಡಿ, 'ಜನರಲ್ಲಿರುವ ಧಾರ್ಮಿಕ ನಂಬಿಕೆಯನ್ನು ಅವರ ಒಳಿತಿಗಾಗಿ ಬಳಸುವ ವಿನೂತನ ಮಾರ್ಗವಾಗಿ ಮಹಾಂತ ಜೋಳಿಗೆಯನ್ನು ಮಹಾಂತ ಶ್ರೀಗಳು ಶೋಧಿಸಿ, ಜಾರಿಗೊಳಿಸಿದ್ದರು. ಜನ ಸಾಮಾನ್ಯರಿಗಾಗಿ ಧಾರ್ಮಿಕ ಮುಖಂಡರು ಈ ರೀತಿಯ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಬೇಕು' ಎಂದರು.
ಕಾಶಪ್ಪನವರ ಮಂತ್ರಿಯಾಗುವರು:
'ಕಾಶಪ್ಪನವರ ನೇರ, ನಿಷ್ಠುರದ ಶಾಸಕರು. ಅವರು ಮುಂಬರುವ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ' ಎಂದು ವಚನಾನಂದ ಸ್ವಾಮೀಜಿ ಹಾಗೂ ವಿನಯ ಗುರೂಜಿ ಭವಿಷ್ಯ ನುಡಿದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಮಾತನಾಡಿ, 'ಕೇವಲ ಪುಸ್ತಕ ಖರೀದಿಸಿ, ಓದುವುದು ಮುಖ್ಯವಲ್ಲ. ಓದಿದನ್ನು ಮನನ ಮಾಡಿಕೊಂಡು, ವಿಶ್ಲೇಷಿಸಿ ಸಮಾಜಕ್ಕೆ ಜ್ಞಾನ ಹಂಚುವುದು ಮುಖ್ಯ. ವೈಯಕ್ತಿಕ ಸಾಧನೆ ಮುಖ್ಯವಲ್ಲ, ಸಮಾಜಕ್ಕೆ ನೆರವಾಗುವುದು ಮುಖ್ಯ. ಮಹಾಂತ ಶ್ರೀಗಳು ಬಸವಾದಿ ಶರಣರನ್ನು ಓದಿ ಸುಮ್ಮನಾಗಲಿಲ್ಲ. ಅದನ್ನು ತಮ್ಮ ಬದುಕಿನಲ್ಲಿ ಹಾಗೂ ಸಮಾಜದಲ್ಲಿ ಅನ್ವಯಿಸಿದರು. ವ್ಯಸನಮುಕ್ತ ಸಮಾಜಕ್ಕಾಗಿ ಕೆಲಸ ಮಾಡುವುದರ ಜತೆಗೆ ವೈಚಾರಿಕ ಚಳುವಳಿಗೂ ಸಾಕಷ್ಟು ಕೊಡುಗೆ ನೀಡಿದರು. ಅವರು ದಿಟ್ಟ ಹಾಗೂ ಜನಪರ ಕಾಳಜಿಯ ಸ್ವಾಮೀಜಿಯಾಗಿದ್ದರು' ಎಂದು ಸ್ಮರಿಸಿದರು.
ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕಿ ಗೌರಮ್ಮ ಎಸ್.ಕಾಶಪ್ಪನವರ, ಡಾ.ಬಿ.ಎಚ್.ಕೆರೂಡಿ, ದೇವಮ್ಮ ಡಿ. ಪಾಟೀಲ, ರಮೇಶ ತುಂಬರಗುದ್ದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.