
ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಸಂಗಪ್ಪ ಉದ್ಘಾಟಿಸಿದರು
ಪ್ರಜಾವಾಣಿ ವಾರ್ತೆ
ಬಾಗಲಕೋಟೆ: ಸದೃಢವಾದ ದೇಹ ಮತ್ತು ಮನಸ್ಸು ಇದ್ದಾಗ ಮಾತ್ರ ಸಾರ್ಥಕವಾದ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ದಿ ಇಲಾಖೆಯ ಎಲ್ಲ ವೃಂದ ಸಂಘಗಳು, ಕ್ರೀಡಾ ಇಲಾಖೆ ಸಹಯೋಗದಲ್ಲಿ ಪಂಚಾಯತ ರಾಜ್ ಇಲಾಖೆ ಸಿಬ್ಬಂದಿಗೆ ಹಮ್ಮಿಕೊಂಡ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಿನನಿತ್ಯದ ಕೆಲಸದ ಒತ್ತಡದಲ್ಲಿ ದೇಹ ಮತ್ತು ಮನಸ್ಸು ಮರೆಯುವುದು ಸಹಜ. ಆದರೆ, ಆರೋಗ್ಯವಿಲ್ಲದೆ ಯಾವುದೇ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಕ್ರೀಡಾಕೂಟದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಮನರಂಜನೆಗೆ ಮಾತ್ರವಲ್ಲ. ಅವು ನಮ್ಮೊಳಗಿನ ಮಾನವೀಯತೆ ಜಾಗೃತಿಗೊಳಿಸುತ್ತವೆ ಎಂದರು.
ನೃತ್ಯ, ಸಂಗೀತ, ನಾಟಕಗಳು ನಮಗಾಗಿರುವ ಒತ್ತಡ ಕಡಿಮೆ ಮಾಡುವುದರ ಜೊತೆಗೆ ಸಹದ್ಯೋಗಿಗಳ ಜೊತೆಗಿನ ಸಂಬಂಧ ಗಟ್ಟಿಗೊಳಿಸುತ್ತವೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕ್ರೀಡೆಯಿಂದ ಶಿಸ್ತು ಮೂಡುತ್ತದೆ. ಇದೇ ತರಹ ಕ್ರೀಡಾಕೂಟವನ್ನು ಬೇರೆ, ಬೇರೆ ಇಲಾಖೆಯವರು ಸಹ ಕ್ರೀಡಾಕೂಟ ಆಯೋಜಿಸುವ ಕೆಲಸ ಆಗಬೇಕು ಎಂದರು.
ಉಪಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಮಾತನಾಡಿ, ಪಂಚಾಯತ ರಾಜ್ ಇಲಾಖೆ ಸಿಬ್ಬಂದಿಯದು ಒತ್ತಡದ ಕೆಲಸ, ಒತ್ತಡದ ಬದುಕಿನಿಂದ ಹೊರಬರಲು ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಮಾತನಾಡಿ, ಆಡಳಿತದಲ್ಲಿ ಸುಧಾರಣೆ ತರಲು, ಉತ್ಸಾಹಿಗಳಾಗಿ ಕೆಲಸ ನಿರ್ವಹಿಸುವಂತಾಗಲಿ ಎಂಬ ದೃಷ್ಟಿಯಿಂದ ಪ್ರತಿ ವರ್ಷ ಕ್ರೀಡಾಕೂಟ ಆಯೋಜನೆ ಮಾಡುತ್ತಾ ಬಂದಿದ್ದೇವೆ. ಕೆಲಸ ಮಾಡಲು ದೇಹದ ಆರೋಗ್ಯದ ಜೊತೆಗೆ ಮನಸ್ಸು ಶುದ್ಧವಾಗಿರಬೇಕಾಗುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿದರು. ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ, ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು ಅಲ್ಲಾಪುರ, ಎಸ್.ಎಂ.ಕಾಂಬಳೆ, ಭೀಮಪ್ಪ ತಳವಾರ, ಮಲ್ಲನಗೌಡ ಬಿರಾದಾರ, ಗುರುಪಾದ ಡೂಗನವರ, ರಾಜು ವಾರದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.