
ಹುನಗುಂದ: ಇಳಕಲ್ ತಾಲ್ಲೂಕಿನ ಗಾಣದಾಳ ಗ್ರಾಮದ ರೈತ ನರಸಿಂಹ ದೇಸಾಯಿ ಅವರು ತೋಟಗಾರಿಕೆಯ ಪಪ್ಪಾಯ ಬೆಳೆದು ಯಶಸ್ಸು ಕಂಡಿದ್ದು, ತೋಟಗಾರಿಕೆ ಬೆಳೆಯಲ್ಲಿ ಆದಾಯ ವೃದ್ಧಿಸಿಕೊಂಡಿದ್ದಾರೆ.
ಎಂಟು ಎಕರೆ ಜಮೀನು ಹೊಂದಿದ್ದು, ಅದರಲ್ಲಿ ನಾಲ್ಕು ಕೊಳವೆ ಬಾವಿಗಳ ನೀರಿನಲ್ಲಿ ನೀರಾವರಿ ಮಾಡುತ್ತಿದ್ದಾರೆ. ಎರಡೂವರೆ ಎಕರೆ ಪ್ರದೇಶದಲ್ಲಿ ಪಪ್ಪಾಯ, ಅರ್ಧ ಎಕರೆಯಲ್ಲಿ ವೀಳ್ಯದೆಲೆ ಹಾಗೂ ಇನ್ನುಳಿದ ಜಮೀನಿನಲ್ಲಿ ಶೇಂಗಾ ಹಾಗೂ ಗೋವಿನಜೋಳ (ಮೆಕ್ಕೆಜೋಳ)ದಂತಹ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ವರ್ಷದ ಹಿಂದೆ ಮಹಾರಾಷ್ಟ್ರ ರಾಜ್ಯದಿಂದ ಪಪ್ಪಾಯಿ ಸಸಿ ಒಂದಕ್ಕೆ ₹12 ರಂತೆ ಎರಡೂವರೆ ಸಾವಿರ ಸಸಿ ತರಿಸಿ ನೆಟ್ಟಿದ್ದಾರೆ. ಸಸಿ ನಾಟಿ ಮಾಡುವುದಕ್ಕೆ ತೋಟಗಾರಿಕೆ ಇಲಾಖೆಯಿಂದ ಉದ್ಯೋಗ ಖಾತರಿ ಯೋಜನೆಯಡಿ ಸಹಾಯ ಧನ ಪಡೆದುಕೊಂಡಿದ್ದಾರೆ. ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ.
ಈಗ ತೋಟದಲ್ಲಿ ಹಣ್ಣುಗಳು ಸಮೃದ್ಧವಾಗಿದ್ದು, ಜೊತೆಗೆ ಉತ್ತಮ ಗುಣಮಟ್ಟ ಹೊಂದಿವೆ. ಈಗಾಗಲೇ ನಾಲ್ಕು ಬಾರಿ ಕಟಾವು ಮಾಡಲಾಗಿದೆ. ವ್ಯಾಪಾರಿಗಳು ತೋಟಕ್ಕೆ ಬಂದು ಹಣ್ಣು ಖರೀದಿಸುತ್ತಾರೆ. ಬೆಂಗಳೂರು, ಮಂಗಳೂರು ಸೇರಿದಂತೆ ಇತರೆ ನಗರಗಳಿಗೆ ಕಳುಹಿಸುತ್ತಾರೆ.
ಆರಂಭದ ದಿನಗಳಲ್ಲಿ ಪಪ್ಪಾಯ ಕಡಿಮೆ ಇಳುವರಿ ಇತ್ತು. ಈಗ ಉತ್ತಮ ಇಳುವರಿ ಬಂದಿದೆ. ಒಂದು ಹಣ್ಣು ಅಂದಾಜು 2 ರಿಂದ 3 ಕೆ.ಜಿ.ವರೆಗೆ ತೂಕ ಬರುತ್ತಿದೆ. 15 ದಿನಗಳಿಗೊಮ್ಮೆ ಹಣ್ಣುಗಳನ್ನು ಕಟಾವು ಮಾಡಲಾಗುತ್ತಿದೆ. ಮಾರುಕಟ್ಟೆ ದರ ಏರಿಳಿತಗಳ ನಡುವೆ 3 ಟನ್ ಹಣ್ಣಿನಿಂದ ₹25 ರಿಂದ 30 ಸಾವಿರವರೆಗೆ ಪ್ರತಿ ತಿಂಗಳ ಆದಾಯ ಬರುತ್ತಿದೆ.
‘ಸಾಂಪ್ರದಾಯಕ ಬೆಳೆಗಳ ಜೊತೆಗೆ ತೋಟಗಾರಿಕೆ ಬೆಳೆ ಪಪ್ಪಾಯ ಬೆಳೆಯಬೇಕು ಎಂಬ ಆಲೋಚನೆ ಬಂದಿತು. ಪರಿಚಯಸ್ಥರೊಬ್ಬನ್ನು ಸಂಪರ್ಕಿಸಿ ಪಪ್ಪಾಯಿ ಬೆಳೆ ಬಗ್ಗೆ ತಿಳಿದುಕೊಂಡೆ. ಸಸಿಗಳನ್ನು ನೆಟ್ಟು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ತೋಟ ನಿರ್ವಹಣೆ ಮಾಡಿದೆ. ಪಪ್ಪಾಯ ಬೆಳೆಗೆ ರೋಗ ಹಾಗೂ ಕೀಟ ಬಾಧೆ ಹೆಚ್ಚು. ಹೀಗಾಗಿ, ಕಾಲ ಕಾಲಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾಹಿತಿ ಪಡೆದು ಔಷಧ ಸಿಂಪಡಿಸಿದ ಪರಿಣಾಮ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ’ ಎಂದು ರೈತ ನರಸಿಂಹ ದೇಸಾಯಿ ಹೇಳಿದರು.
ಪಪ್ಪಾಯಿ ಜೊತೆಗೆ ಎರಡು ಎತ್ತು, ಐದು ಆಡು, ಎರಡು ಎಮ್ಮೆ, ಹತ್ತು ಕೋಳಿಗಳನ್ನು ಸಾಕುವ ಮೂಲಕ ಮಿಶ್ರ ಬೇಸಾಯಕ್ಕೂ ಆದ್ಯತೆ ನೀಡಿದ್ದಾರೆ. ಇವುಗಳಿಂದ ಕುಟುಂಬ ನಿರ್ವಹಣೆಗೆ ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ ಎನ್ನುತ್ತಾರೆ ಅವರು.
ಪಪ್ಪಾಯಿ ಸಸಿ ಬೆಳವಣಿಗೆಗೆ ಹೆಚ್ಚಿನ ಶ್ರಮವಹಿಸಬೇಕು. ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದಾಗ ಉತ್ತಮ ಇಳುವರಿ ಪಡೆಯಬಹುದುನರಸಿಂಹ ದೇಸಾಯಿ ರೈತ ಗಾಣದಾಳ ಗ್ರಾಮ
ಇಲಾಖೆಯಿಂದ ತೋಟಗಾರಿಕೆ ಬೆಳೆಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ರೈತರು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಬೆಳೆ ಬೆಳೆದಾಗ ಹೆಚ್ಚಿನ ಲಾಭಗಳಿಸಲು ಸಾಧ್ಯಸುಭಾಷ್ ಸುಲ್ಪಿ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ ಹುನಗುಂದ
ವೀಳ್ಯದೆಲೆ ಬೆಳೆ
ಅರ್ಧ ಎಕರೆ ಜಮೀನನಲ್ಲಿ ಅರ್ಧ ಎಕರೆ ವೀಳ್ಯದೆಲೆ ಬೆಳೆದಿದ್ದಾರೆ. ವಾರಕ್ಕೊಮ್ಮೆ 5 ರಿಂದ 6 ಪೆಂಡಿ ( ದೊಡ್ಡ ಕಟ್ಟು) ವೀಳ್ಯದೆಲೆ ಬರುತ್ತಿದ್ದು ಮಾರುಕಟ್ಟೆಯಲ್ಲಿ ₹2 ರಿಂದ 3 ಸಾವಿರ ಸಿಗುತ್ತಿದೆ. ಈ ಹಣ ಕುಟುಂಬದ ಖರ್ಚು ಸರಿದೂಗಿಸಲು ಸಹಕಾರಿಯಾಗಿದೆ ಎಂದು ದೇಸಾಯಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.