ಬಾದಾಮಿ: ‘ಲೇಖಕಿ ಕಸ್ತೂರಿ ಬಾಯರಿ ಬರೆದ ಕೃತಿಗಳಲ್ಲಿ ಸಮಾಜದಲ್ಲಿ ಹೆಣ್ಣುಮಕ್ಕಳ ಶೋಷಣೆ ಮತ್ತು ಹೆಣ್ಣಿನ ಹೃದಯದ ತಲ್ಲಣಗಳನ್ನು ಕಾಣಬಹುದಾಗಿದೆ. ಜಿಲ್ಲೆಯಲ್ಲಿ ಕನ್ನಡ ಕಥಾ ಸಾಹಿತ್ಯ ಕೃಷಿ ಕ್ಷೇತ್ರಕ್ಕೆ ಹೆಸರು ತಂದವರಲ್ಲಿ ಒಬ್ಬರಾಗಿದ್ದರು’ ಎಂದು ಲೇಖಕಿ ಲಲಿತಾ ಹೊಸಪ್ಯಾಟಿ ಹೇಳಿದರು.
ತಾಲ್ಲೂಕು ಘಟಕದ ಶರಣ ಸಾಹಿತ್ಯ ಪರಿಷತ್ತು ಮತ್ತು ಜಿ.ಎಂ. ಕಲ್ಯಾಣಶೆಟ್ಟಿ ಪದವಿ ಪೂರ್ವ ವಿದ್ಯಾಲಯದಲ್ಲಿ ಆಶ್ರಯದಲ್ಲಿ ಬುಧವಾರ ಲೇಖಕಿ ಕಸ್ತೂರಿ ಬಾಯರಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿನಿಧಿ ಸಮಾರಂಭದಲ್ಲಿ ಕಸ್ತೂರಿ ಬಾಯರಿ ಬರೆದ ‘ಪಾರಿಜಾತ’ ಕಥಾ ಸಂಕಲನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
‘ಸಮಾಜದಲ್ಲಿ ಹೆಣ್ಣು ತಾಯಿ, ತಂಗಿ, ಹೆಂಡತಿ, ಮಗಳಾಗಿ ತಾನು ಹೊತ್ತುಕೊಂಡ ನೋವುಗಳನ್ನು ಇನ್ನೊಬ್ಬರಿಗೆ ಹಂಚುವುದಲ್ಲ, ಬೆಳಕನ್ನು ಕೊಡುವ ಕಥಾವಸ್ತುವನ್ನು ಕೃತಿಗಳಲ್ಲಿ ಕಾಣುತ್ತೇವೆ. ಅವರ ಕಥಾ ಕೃತಿಗಳನ್ನು ವಿದ್ಯಾರ್ಥಿಗಳು ಓದಬೇಕು ’ ಎಂದು ತಿಳಿಸಿದರು.
‘ ಲೇಖಕಿ ಕಸ್ತೂರಿ ಬಾಯರಿ ಜನಿಸಿದ್ದು ಮಲೆನಾಡಿನ ಉಡುಪಿಯಲ್ಲಿ ಆದರೆ ಅವರು ಬಾಳಿ ಬದುಕಿ ಶಿಕ್ಷಣ ಪಡೆದು ಸಾಹಿತ್ಯ ಕೃತಿಗಳನ್ನು ರಚಿಸಿದ್ದು ಬಯಲು ನಾಡಿನ ಚಾಲುಕ್ಯರ ನಾಡಿನಲ್ಲಿ. ಅವರ ಕೃತಿಗಳಲ್ಲಿ ಮಲೆನಾಡು ಮತ್ತು ಬಯಲು ನಾಡಿನ ಕನ್ನಡ ಪದಪುಂಜಗಳಿಂದ ಶ್ರೇಷ್ಠ ಸಾಹಿತ್ಯ ಕೃತಿಗಳು ರಚಿತವಾಗಿವೆ’ ಎಂದು ಹೇಳಿದರು.
‘ ಕಥಾ ಸಾಹಿತ್ಯ ಕೃತಿಗಳು ಪ್ರಮುಖವಾಗಿ ಕಾತ್ಯಾಯಿನಿ, ನದಿಯಾದವಳು, ಬೋರಂಗಿ, ಗಂಧವತಿ, ಕಲ್ಲಾದಳು ಅಹಲ್ಯೆ, ಅಕ್ಕ ಎಂಬ ಹೆಣ್ಣುಮಕ್ಕಳ ಸ್ತ್ರೀವಾಚಕ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಕಥೆಯಲ್ಲಿರುವ ಅದ್ಭುತವಾದ ಸಂದೇಶಗಳು ಕಥೆಯ ಮೂಲಕ ಬದುಕನ್ನು ಕಟ್ಟುವ ಯಾವುದೇ ನಿಷ್ಕರ್ಷೆಗೆ ಒಳಗಾಗದ ಕಥೆಗಳನ್ನು ಬರೆದರು’ ಎಂದು ಶ್ಲಾಘಿಸಿದರು.
ಡಾ.ಎಚ್.ಎಫ್. ಯೋಗಪ್ಪನವರ ಮಾತನಾಡಿದರು. ತಾಲ್ಲೂಕು ಘಟಕದ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಉಮಾದೇವಿ ಪಟ್ಟಣಶೆಟ್ಟಿ, ಪ್ರಾಚಾರ್ಯ ಪ್ರಭು ಜವಳಿ, ರಮೇಶ ಬಾಯರಿ, ರವೀಂದ್ರ ಮೂಲಿಮನಿ, ರೋಹಿಣಿ ಬಾಯರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.