ADVERTISEMENT

ಪಟ್ಟದಕಲ್ಲು | ಇಲ್ಲದ ಪಾರ್ಕಿಂಗ್‌ ಜಾಗ: ರಸ್ತೆ ಬದಿ ನಿಲ್ಲಿಸಿದರೂ ಶುಲ್ಕ ವಸೂಲಿ!

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:08 IST
Last Updated 12 ಡಿಸೆಂಬರ್ 2025, 5:08 IST
ಬಾದಾಮಿ ಸಮೀಪದ ಪಟ್ಟದಕಲ್ಲಿನಲ್ಲಿ ಪ್ರವಾಸಿ ವಾಹನಗಳಿಗೆ ಪ್ರವೇಶ ಫೀ ವಸೂಲಿ ಮಾಡುತ್ತಿರುವುದು.
ಬಾದಾಮಿ ಸಮೀಪದ ಪಟ್ಟದಕಲ್ಲಿನಲ್ಲಿ ಪ್ರವಾಸಿ ವಾಹನಗಳಿಗೆ ಪ್ರವೇಶ ಫೀ ವಸೂಲಿ ಮಾಡುತ್ತಿರುವುದು.   

ಪಟ್ಟದಕಲ್ಲು (ಬಾದಾಮಿ): ವಿಶ್ವಪರಂಪರೆ ತಾಣ ಪಟ್ಟದಕಲ್ಲು ಸ್ಮಾರಕ ವೀಕ್ಷಿಸಲು ಬರುವ ಪ್ರವಾಸಿಗರ ವಾಹನಗಳಿಗೆ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಪಟ್ಟದಕಲ್ಲು ಗ್ರಾಮ ಪಂಚಾಯಿತಿ ಜ 17, 2024ರಂದು ಪಿಡಿಒಗೆ ತಾಲ್ಲೂಕು ಪಂಚಾಯಿತಿ ಇಒ ಪತ್ರ ಬರೆದಿದ್ದು, ಸ್ಮಾರಕಗಳ ಸುತ್ತ ಮುತ್ತ ಸ್ವಚ್ಛತೆಗೆ ಮತ್ತು ಸಂಪನ್ಮೂಲ ಕ್ರೋಢಿಕರಣಕ್ಕಾಗಿ ವಾಹನಗಳಿಗೆ ಪ್ರವೇಶ ಶುಲ್ಕ, ಮತ್ತು ಸಣ್ಣ ವರ್ತಕರಿಗೆ ಹಣ ನಿಗದಿ ಮಾಡಲುಡಿ ಸೂಚನೆ ನೀಡಿದ್ದರು.

ವಾಹನದ ಪ್ರವೇಶ ಶುಲ್ಕ ₹30, ಸಾಲು ಅಂಗಡಿಕಾರಿಗೆ ನಿತ್ಯ ₹10, ತಳ್ಳು ಗಾಡಿ ಬುಟ್ಟಿ ವರ್ತಕರಿಗೆ ₹ 5 ನಿಗದಿ ಮಾಡಿ ಆದೇಶಿಸಿದ್ದಾರೆ. ಆದರೆ ಇಲ್ಲಿನ ವಾಹನಗಳಿಗೆ ₹30 ಬದಲಿಗೆ ₹50 ಪಡೆಯುವರು. ಅಂಗಡಿಕಾರರಿಗೆ, ತಳ್ಳುವ, ಬುಟ್ಟಿ ವ್ಯಾಪಾರಸ್ಥರಿಗೆ ಯಾವುದೇ ವಸೂಲಿ ಮಾಡುವುದಿಲ್ಲ ಎಂದು ತಿಳಿದಿದೆ.

ADVERTISEMENT

‘ಸ್ಮಾರಕಗಳ ಸುತ್ತ ಮುತ್ತ ಗ್ರಾಮ ಪಂಚಾಯಿತಿ ಜಾಗವಿದೆ. ಸ್ವಚ್ಛತೆ ಸಲುವಾಗಿ ಗ್ರಾಮ ಪಂಚಾತಿಯಿಂದ ಯಿಂದ ಪ್ರವಾಸಿ ವಾಹನಗಳಿಗೆ ಪ್ರವೇಶ ಹಣ ಪಡೆಯುತ್ತೇವೆ. ₹5.70 ಲಕ್ಷಕ್ಕೆ ಟೆಂಡರ್ ಆಗಿದೆ ’ ಎಂದು ಗ್ರಾಮ ಪಂಚಾಯ್ತಿ ಪಿಡಿಒ ಕೆ.ಎನ್. ರಾಮದುರ್ಗ ಪ್ರತಿಕ್ರಿಯಿಸಿದರು.

’ವಾಹನಗಳು ಸರ್ಕಾರಿ ರಸ್ತೆಯಲ್ಲಿ ನಿಲ್ಲುತ್ತವೆ. ಪ್ರವಾಸಿ ವಾಹನಗಳಿಗೆ ಪ್ರವೇಶ ಶುಲ್ಕ ವಸೂಲಿ ಬೇಡ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಮತ್ತು ಸದಸ್ಯರ ವಿಶ್ವಾಸ ಪಡೆಯದೇ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದೀರಿ’ ಎಂದು ಸದಸ್ಯರು ಟೆಂಡರ್ ವಿರೋಧಿಸಿ ಪಿಡಿಒಗೆ ಮನವಿ ಸಲ್ಲಿಸಿದರೂ ಟೆಂಡರ್ ಮಾಡಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಸದಸ್ಯರು ಆರೋಪಿಸಿದರು.

‘ಪ್ರವಾಸಿಗರಿಗೆ ವಾಹನ ನಿಲ್ಲಿಸಲು ಇಲ್ಲಿ ಜಾಗವಿಲ್ಲ. ಪಟ್ಟದಕಲ್ಲಿನ ರಸ್ತೆ ಪಕ್ಕದಲ್ಲಿ ನಿಲ್ಲಿಸಿದರೆ ವಾಹನ ಪ್ರವೇಶಕ್ಕೆ ಹಣ ಪಡೆಯುತ್ತಾರೆ. ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯಾಗಬೇಕು ’ ಎಂದು ಮಂಡ್ಯದ ಪ್ರವಾಸಿ ಸುರೇಶಗೌಡ ಹೇಳಿದರು.

‘ಕಾರ್ ಪಾರ್ಕಿಂಗ್ ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆಯು ನಿವೇಶನವನ್ನು ಈಚೆಗೆ ಕೆಎಸ್‌ಡಿಸಿಗೆ ಹಸ್ತಾಂತರಿಸಲಾಗಿದೆ. ಶೀಘ್ರದಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡುವರು ’ ಎಂದು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಜಿ.ಎಸ್. ಹಿತ್ತಲಮನಿ ಪ್ರತಿಕ್ರಿಯಿಸಿದರು.

ವಾಹನಗಳಿಗೆ ಪ್ರವೇಶದ ಆದೇಶದಂತೆ ರೂ. 30 ಬದಲಿಗೆ ರೂ. 50 ರಸೀದಿ ಕೊಟ್ಟು ಹಣ ಪಡೆಯುವ ಕುರಿತು ತಾಲ್ಲೂಕು ಪಂಚಾಯ್ತಿ ಇಒ ಸತೀಶ ಮಾಕೊಂಡ ಅವರಿಗೆ ಪ್ರಶ್ನಿಸಿದಾಗ ಪರಿಶೀಲಿಸುವುದಾಗಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.