ADVERTISEMENT

ಪ್ರಧಾನಿ ಘೋಷಣೆ: ದೆಹಲಿಯತ್ತ 5100 ಕಿ.ಮೀ ಕ್ರಮಿಸಿದ್ದ ಟೆಕಿ ಪಾದಯಾತ್ರೆ ಮೊಟಕು

ದೆಹಲಿ ಹಾದಿಯಲ್ಲಿ 5100 ಕಿ.ಮೀ ಕ್ರಮಿಸಿದ್ದ ನಾಗರಾಜ ಕಲ್ಲಕುಟಿಗರ

ವೆಂಕಟೇಶ ಜಿ.ಎಚ್.
Published 19 ನವೆಂಬರ್ 2021, 11:58 IST
Last Updated 19 ನವೆಂಬರ್ 2021, 11:58 IST
ನಾಗರಾಜ ಕಲ್ಲಕುಟಿಗರ
ನಾಗರಾಜ ಕಲ್ಲಕುಟಿಗರ   

ಬಾಗಲಕೋಟೆ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಘೋಷಿಸುತ್ತಿದ್ದಂತೆಯೇ ಬಾಗಲಕೋಟೆಯ ಟೆಕಿ ನಾಗರಾಜ ಕಲ್ಲುಕುಟಿಗರ್ ತಮ್ಮ ದೆಹಲಿ ಪಾದಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ಅವರು ಕಳೆದ ಫೆಬ್ರುವರಿ 2ರಿಂದ ಚಾಮರಾಜನಗರ ಜಿಲ್ಲೆ ಮಲೆಮಹಾದೇಶ್ವರ ಬೆಟ್ಟದಿಂದ ದೆಹಲಿಗೆ ಪಾದಯಾತ್ರೆ ಹೊರಟಿದ್ದರು. ಈಗಾಗಲೇ ರಾಜ್ಯದ 31 ಜಿಲ್ಲೆಗಳನ್ನು ಸುತ್ತಾಡಿ ಕಾಯ್ದೆಯ ಬಗ್ಗೆ ಜನರ ಗಮನ ಸೆಳೆದಿದ್ದ ಅವರು,ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶ ಮೂಲಕ 5100 ಕಿ.ಮೀ ಕ್ರಮಿಸಿ ದೆಹಲಿಗೆ 100 ಕಿ.ಮೀ ದೂರದಲ್ಲಿದ್ದರು.

’ಪ್ರಧಾನಿ ನರೇಂದ್ರ ಮೋದಿ ಅವರು ಕಾಯ್ದೆಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ವೇಳೆ ಉತ್ತರಪ್ರದೇಶ ರಾಜ್ಯದಮಥುರಾ ಜಿಲ್ಲೆ ಕೊಸಿಕೊಲನ್ ಗ್ರಾಮದಲ್ಲಿದ್ದೆನು. ಗೆಳೆಯರೊಬ್ಬರು ಫೋನ್ ಮಾಡಿ ಮಾಹಿತಿ ನೀಡಿದರು. ಅಲ್ಲಿಯೇ ಪಾದಯಾತ್ರೆ ಸ್ಥಗಿತಗೊಳಿಸಿ ದೆಹಲಿಯತ್ತ ಹೊರಟಿದ್ದೇನೆ‘ ಎಂದು ನಾಗರಾಜ ಕಲ್ಲಕುಟಿಗರ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

ADVERTISEMENT

’ಪ್ರಧಾನಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಆದರೆ ಅದನ್ನು ಸಂಸತ್ತಿನಲ್ಲಿ ಪ್ರಕಟಿಸಬೇಕು‘ ಎಂದು ಹೇಳಿದ ನಾಗರಾಜ, ಇದು ಚಳಿ, ಗಾಳಿ, ಮಳೆಯನ್ನು ಲೆಕ್ಕಿಸದೇ ಜೀವದ ಹಂಗು ತೊರೆದು ಪ್ರತಿಭಟನೆಗೆ ನಿಂತ ನಮ್ಮ ರೈತ ಕುಲಕ್ಕೆ ಸಂದ ಜಯ‘ ಎಂದು ಬಣ್ಣಿಸಿದರು.

ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ನಾಗರಾಜ, ಈ ಮೊದಲು ಜರ್ಮನಿಯಲ್ಲಿ ಅಲ್ಲಿನ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದರು. ಅರವಿಂದ ಕೇಜ್ರಿವಾಲ್ ಅವರ ಆಮ್‌ ಆದ್ಮಿ ಪಕ್ಷದ ಆಶಯಗಳಿಂದ ಪ್ರೇರಿತರಾಗಿ ಊರಿಗೆ ಮರಳಿದ್ದ ಅವರು, ಬಾಗಲಕೋಟೆಯಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು.

ಪಾದಯಾತ್ರೆಯ ಹಾದಿಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಾರಿಯಲ್ಲಿ ಸಿಗುವ ಊರುಗಳಲ್ಲಿ ರೈತರ ಮನೆ, ದೇವಸ್ಥಾನಗಳಲ್ಲಿ ಉಳಿದುಕೊಂಡು ತಮ್ಮ ಯಾತ್ರೆ ಮುಂದುವರೆಸುತ್ತಿದ್ದರು. ಸ್ವರಾಜ್ ಪಕ್ಷ ಹಾಗೂ ಆಮ್‌ ಆದ್ಮಿ ಪಕ್ಷಗಳ ಗೆಳೆಯರು ನಾಗರಾಜ ಅವರ ಬೆಂಬಲಕ್ಕೆ ನಿಂತಿದ್ದರು. ದಾರಿ ಮಧ್ಯೆ ರೈತ ಸಂಘದ ಗೆಳೆಯರು ಇದಿರುಗೊಂಡು ಸತ್ಕರಿಸಿ ಬೀಳ್ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.