ಬಾಗಲಕೋಟೆ: ಪೋಕ್ಸೊ ಮತ್ತು ಬಾಲ್ಯ ವಿವಾಹದಂತಹ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ದಾಖಲೆಗಳು ಮುಖ್ಯವಾಗುತ್ತವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಾಲಯದ ಸಭಾಭವನದಲ್ಲಿ ಗುರುವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಡಬ್ಲುಡಿಒ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಮಕ್ಕಳ ಪೊಲೀಸ್ ಅಧಿಕಾರಿಗಳಿಗೆ ಪೋಕ್ಸೊ, ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಒಂದು ಪ್ರಕರಣ ದಾಖಲಾದಾಗ ಆ ಪ್ರಕರಣದ ಬಗ್ಗೆ ಸಾಕ್ಷ್ಯಗಳಲ್ಲಿ ಡಿಜಿಟಲ್ ಹಾಗೂ ಇತರೆ ದಾಖಲೆಗಳನ್ನು ಸಂಗ್ರಹಿಸಿಕೊಳ್ಳುವುದು ಮುಖ್ಯವಾಗಿದೆ. ಪೋಕ್ಸೊ, ಬಾಲ್ಯ ವಿವಾಹದಂತಹ ಪ್ರಕರಣಗಳಲ್ಲಿ ವಿದ್ಯಾರ್ಥಿಗಳ ಐಡಿ ಕಾರ್ಡ್ ಸಹ ದಾಖಲೆಯಾಗಿ ಪರಿಣಮಿಸುತ್ತವೆ ಎಂದರು.
ಕೆಳಹಂತದಲ್ಲಿರುವ ಅಧಿಕಾರಿಗಳು ಪ್ರಕರಣ ಬಗ್ಗೆ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದಲ್ಲಿ ಪ್ರಕರಣ ಇತ್ಯರ್ಥ ಪಡಿಸಲು ಅನುಕೂಲವಾಗುತ್ತದೆ. ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಅನುಷ್ಠಾನ ಅಧಿಕಾರಿಗಳಿಗೆ ಪೋಕ್ಸೊ ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ಮಹತ್ವದ್ದಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾತನಾಡಿ, ಪ್ರಕರಣ ವಿಚಾರಣೆಯಲ್ಲಿ ನಿರ್ಲಕ್ಷ ಮಾಡಬಾರದು. ಸಾಕ್ಷ್ಯಗಳ ಸಂಗ್ರಹದಿಂದ ಪ್ರಕರಣಗಳ ಇತ್ಯರ್ಥಕ್ಕೆ ಅನುಕೂಲವಾಗಲಿದೆ. ತಂತ್ರಜ್ಞಾನದ ಯುಗದಲ್ಲಿ ಡಿಜಿಟಲ್ ದಾಖಲೆಗಳು ಮಹತ್ವ ಪಡೆದುಕೊಂಡಿವೆ ಎಂದು ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹನಮಂತಗೌಡ ಪಾಟೀಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಡಿವೈಎಸ್‍ಪಿ ಗಜಾನನ ಸುತಾರ, ತರಬೇತುದಾರರಾದ ರೋಹಿತ್ ಸಿ.ಜಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀಣಾ ಎಂ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.