ADVERTISEMENT

ಬಾಗಲಕೋಟೆ| ಕಾಯುತ್ತೇವೆ ಎಂದರೂ ಮನೆಗೆ ಬೀಗ ಹಾಕುವಾಗ ಮಾಹಿತಿ ಕೊಡುತ್ತಿಲ್ಲ!

ಪೊಲೀಸ್‌ ಇಲಾಖೆಯ ಪ್ರಯೋಗಕ್ಕೆ ಸಾರ್ವಜನಿಕರಿಂದ ದೊರಕದ ಸ್ಪಂದನೆ

ಅಭಿಷೇಕ ಎನ್.ಪಾಟೀಲ
Published 13 ಡಿಸೆಂಬರ್ 2019, 19:30 IST
Last Updated 13 ಡಿಸೆಂಬರ್ 2019, 19:30 IST
ಕಳ್ಳತನ
ಕಳ್ಳತನ   

ಬಾಗಲಕೋಟೆ: ಮನೆಗೆ ಬೀಗ ಹಾಕಿಕೊಂಡು ಹೋಗುವಾಗ ಸಮೀಪದ ಠಾಣೆಗೆ ಮಾಹಿತಿ ನೀಡಿ ಎಂದು ಪೊಲೀಸರು ಜಾಗೃತಿ ಮೂಡಿಸಿದರೂ ಸಾರ್ವಜನಿಕರು ಅದಕ್ಕೆ ಸ್ಪಂದಿಸುತ್ತಿಲ್ಲ. ಇದರಿಂದ ನಗರದಲ್ಲಿ ಮನೆಗಳ್ಳತನ ಪ್ರಕರಣಗಳು ಎಂದಿನಂತೆಯೇ ಮುಂದುವರೆದಿವೆ. ಜನರ ಈ ಅಸಹಕಾರ ಪೊಲೀಸ್ ಅಧಿಕಾರಿಗಳ ಬೇಸರಕ್ಕೂ ಕಾರಣವಾಗಿದೆ.

’ಮನೆಗೆ ಬೀಗ ಹಾಕಿ ಪರವೂರಿಗೆ ತೆರಳಬೇಕಾದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಎಷ್ಟು ದಿನ ನೀವು ಮನೆಯಲ್ಲಿ ಇರುವುದಿಲ್ಲ ಎಂದು ಗೊತ್ತಾದರೆ ಬೀಗ ಹಾಕಿದ ಮನೆಯ ಮೇಲೆ ನಿಗಾ ಇಡಲುನಮಗೆ ಅನುಕೂಲವಾಗುತ್ತದೆ. ನೀವು ಮರಳಿ ಬರುವವರೆಗೂ ಮನೆಯ ಸುರಕ್ಷತೆ ನಮ್ಮ ಜವಾಬ್ದಾರಿ‘ ಎಂದು ಪೊಲೀಸ್ ಇಲಾಖೆ ಕಳೆದ ಮೇ ತಿಂಗಳಿನಿಂದ ನಗರದಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮ ಆರಂಭಿಸಿದೆ.

’ಇಲಾಖೆಯ ಈ ಮನವಿಗೆ ನಗರದ ಶೇ 90 ರಷ್ಟು ಜನರು ಸ್ಪಂದಿಸುತ್ತಿಲ್ಲ. ಮಾಹಿತಿಯನ್ನೂ ನೀಡುತ್ತಿಲ್ಲ. ಮನೆಯಲ್ಲಿ ಕಳವು ನಡೆದಾಗ ಮಾತ್ರ ನಮ್ಮ ನೆನಪಾಗುತ್ತದೆ. ಆಗ ಬಂದು ಗೋಳಾಡುತ್ತಾರೆ‘ ಎಂಬುದು ಪೊಲೀಸ್ ಅಧಿಕಾರಿಗಳ ಬೇಸರ.

ADVERTISEMENT

ಫೋನ್ ನಂ ಕೊಡಲಾಗಿತ್ತು:

ಮನೆ ಬಿಡುವಾಗ ಪೊಲೀಸರಿಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ಸಂಬಂಧಿಸಿದ ಠಾಣೆಯ ಫೋನ್‌ ಸಂಖ್ಯೆಯನ್ನು ಎಲ್ಲ ಬೀದಿಗಳಲ್ಲೂ ಫಲಕಗಳನ್ನು ಹಾಕಿ ಅದರಲ್ಲಿ ಪ್ರದರ್ಶಿಸಲಾಗಿತ್ತು. ಮಾಧ್ಯಮಗಳಲ್ಲಿ ಪ್ರಕಟಣೆ ಕೂಡ ಕೊಟ್ಟಿದ್ದರು. ಓಣಿಗಳಲ್ಲಿ ಜಾಗೃತಿ ಸಭೆ ನಡೆಸಿ ಮಾಹಿತಿ ಕೊಡಲಾಗಿತ್ತು. ಆದರೂ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ ಎಂದು ಪೊಲೀಸರು ಹೇಳುತ್ತಾರೆ.

’ಇಲಾಖೆಯ ಈ ಪ್ರಯೋಗಕ್ಕೆ ಆರಂಭದಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಈಗ ಸಿಗುತ್ತಿಲ್ಲ. ಮನೆಗಳ್ಳತನ ಪ್ರಕರಣಗಳೂ ಕಡಿಮೆಯಾಗಿದ್ದವು. ಆದರೆ ಈಗ ದಿನಕ್ಕೆ ಒಂದು ಇಲ್ಲವೇ ಎರಡು ಕರೆ ಬಂದರೆ ದೊಡ್ಡದು‘ ಎಂದು ಬಾಗಲಕೋಟೆ ಸರ್ಕಲ್ ಇನ್‌ಸ್ಪೆಕ್ಟರ್ ಐ.ಆರ್.ಪಟ್ಟಣಶೆಟ್ಟಿ ಹೇಳುತ್ತಾರೆ.

ಗಸ್ತು ವಾಹನ ನಿಯೋಜನೆ:

ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ ತಡೆಯಲು ಬಾಗಲಕೋಟೆ, ವಿದ್ಯಾಗಿರಿ ಹಾಗೂ ನವನಗರದಲ್ಲಿ ತಲಾ ಒಂದೊಂದು ಚಾಲುಕ್ಯ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಎಎಸ್‌ಐ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ದಿನದ 24 ಗಂಟೆಯೂ ಸಿಬ್ಬಂದಿ ಗಸ್ತು ತಿರುಗುತ್ತಾರೆ ಎಂದು ಪಟ್ಟಣಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.