ADVERTISEMENT

ಬಾಗಲಕೋಟೆ: ರಜೆ ದಿನ ಕುರಿಗಾಹಿ; ಉಳಿದ ದಿನ ವಿದ್ಯಾರ್ಥಿ!

ದ್ವಿತೀಯ ಪಿಯುಸಿ ಕಲಾ ವಿಭಾಗ: ಭಗವತಿ ಕಾಲೇಜು ವಿದ್ಯಾರ್ಥಿ ಸಾಧನೆ

ವೆಂಕಟೇಶ್ ಜಿ.ಎಚ್
Published 15 ಜುಲೈ 2020, 17:12 IST
Last Updated 15 ಜುಲೈ 2020, 17:12 IST
ಹಿರೇಹೊದ್ಲೂರಿನಲ್ಲಿ ಕುರಿ ಹಿಂಡಿನೊಂದಿಗೆ ರಮೇಶ ಡೊಳ್ಳಿನ
ಹಿರೇಹೊದ್ಲೂರಿನಲ್ಲಿ ಕುರಿ ಹಿಂಡಿನೊಂದಿಗೆ ರಮೇಶ ಡೊಳ್ಳಿನ   

ಬಾಗಲಕೋಟೆ: ಹಬ್ಬ–ಹರಿದಿನ, ವಾರಾಂತ್ಯದ ರಜೆಯಲ್ಲಿ ಎರಡು ದಿನ ಅಪ್ಪ ಇಲ್ಲವೇ ಅಣ್ಣನನ್ನು ಮನೆಯಲ್ಲಿ ಬಿಟ್ಟು ಕುರಿ ಕಾಯುವುದು. ಉಳಿದ ವೇಳೆ ದಿನಕ್ಕೆ ಆರು ತಾಸು ಓದಲು ಮೀಸಲು..

ಇದು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 95.59 ಅಂಕಗಳಿಸಿರುವ ಬಾಗಲಕೋಟೆ ತಾಲ್ಲೂಕಿನ ಹಿರೇ ಹೊದ್ಲೂರು ಗ್ರಾಮದ ರಮೇಶ ಡೊಳ್ಳಿನ ದಿನಚರಿ.

ರಮೇಶ ಅವರ ತಂದೆ ಮಹಾಂತಪ್ಪ ಡೊಳ್ಳಿನ ಹಾಗೂ ಅಣ್ಣ ಶಿವಾನಂದ ಇಬ್ಬರೂ ಕುರಿಗಾಹಿಗಳು. ಸ್ವಂತ ಜಮೀನು ಹೊಂದಿರದ ಕುಟುಂಬಕ್ಕೆ 60 ಕುರಿಗಳೇ ಪಿತ್ರಾರ್ಜಿತ ಆಸ್ತಿ. ಮಳೆಗಾಲ ಹೊರತುಪಡಿಸಿ ವರ್ಷದ ಉಳಿದ ದಿನ ಅಣ್ಣ ಇಲ್ಲವೇ ಅಪ್ಪ ಇಬ್ಬರಲ್ಲಿ ಒಬ್ಬರು ಬಾಗಲಕೋಟೆ–ವಿಜಯಪುರ ಜಿಲ್ಲೆಗಳ ವಿವಿಧ ಗ್ರಾಮಗಳಿಗೆ ಸಂಚರಿಸಿ ಕುರಿ ಕಾಯುತ್ತಾರೆ. ರಜೆ ದಿನಗಳಲ್ಲಿ ಅಪ್ಪ ಇಲ್ಲವೇ ಅಣ್ಣ ಇಬ್ಬರಲ್ಲಿ ಒಬ್ಬರ ಬದಲಿಗೆ ರಮೇಶನ ಪಾಳಿ.

ADVERTISEMENT

ಸಮೀಪದ ಭಗವತಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿರುವ ರಮೇಶ, ನಿತ್ಯ ಊರಿನಿಂದ ಓಡಾಟ ನಡೆಸಿ ಕಾಲೇಜು ಮುಗಿಸಿದ್ದಾನೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇತಿಹಾಸ ವಿಷಯದಲ್ಲಿ 100ಕ್ಕೆ 97 ಅಂಕ, ಸಮಾಜಶಾಸ್ತ್ರ 97, ಅರ್ಥಶಾಸ್ತ್ರ 94, ರಾಜ್ಯಶಾಸ್ತ್ರದಲ್ಲಿ 99, ಕನ್ನಡದಲ್ಲಿ 98, ಇಂಗ್ಲಿಷ್ ವಿಷಯದಲ್ಲಿ 88 ಅಂಕ ಗಳಿಸಿದ್ದಾನೆ.

’ಕಾಲೇಜಿನಲ್ಲಿ ಪ್ರಾಚಾರ್ಯ, ಉಪನ್ಯಾಸಕರು, ಹಿರಿಯ ವಿದ್ಯಾರ್ಥಿಗಳು ಬಹಳಷ್ಟು ನೆರವಾದರು. ಪರೀಕ್ಷೆಯನ್ನು ಯಾವುದೇ ಆತಂಕವಿಲ್ಲದೇ ಎದುರಿಸುವುದನ್ನುಮನೆಗೆ ಕರೆದು ಹೇಳಿಕೊಟ್ಟರು. ಊರಿನಲ್ಲಿ ನೌಕಾಪಡೆ ನಿವೃತ್ತ ಅಧಿಕಾರಿ ಹಾಗೂ ನಿವೃತ್ತ ಉಪನ್ಯಾಸಕರೊಬ್ಬರು ಪ್ರೋತ್ಸಾಹ ನೀಡಿದರು. ಜೊತೆಗೆ ಅಪ್ಪ ಮಹಾಂತಪ್ಪ, ಅವ್ವ ಸೋಮವ್ವ ಬೆನ್ನಿಗೆ ನಿಂತರು‘ ಎಂದು ರಮೇಶ ಸ್ಮರಿಸುತ್ತಾರೆ.

ರಮೇಶನ ಸಂಪರ್ಕ ಸಂಖ್ಯೆ: 8618263059.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.