ಗುಳೇದಗುಡ್ಡ: ಗುಳೇದಗುಡ್ಡ ರೈಲ್ವೆ ನಿಲ್ದಾಣದಿಂದ ಖಾಜಿ ಬೂದಿಹಾಳ ಗ್ರಾಮಕ್ಕೆ ಹೋಗುವ 1.5 ಕಿ.ಮೀ ರಸ್ತೆ ಕಾಮಗಾರಿಯನ್ನು ₹ 1.10 ಕೋಟಿ ಅನುದಾನದಲ್ಲಿ ವರ್ಷದ ಹಿಂದೆ ಆರಂಭಿಸಲಾಗಿತ್ತು. ಅರಣ್ಯ ಇಲಾಖೆಯ ಆಕ್ಷೇಪದಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಹಲವು ವರ್ಷಗಳಿಂದ ಗ್ರಾಮಕ್ಕೆ ಇದೇ ಮಾರ್ಗದಲ್ಲಿ ಸಂಚರಿಸಲಾಗುತ್ತಿದೆ. ಈಚಿನ ವರ್ಷಗಳಲ್ಲಿ ರಸ್ತೆ ಹಾಳಾಗಿತ್ತು. ಲೋಕೋಪಯೋಗಿ ಇಲಾಖೆಯು ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಅದಕ್ಕೆ ಅರಣ್ಯ ಇಲಾಖೆ ಆಕ್ಷೇಪ ಎತ್ತಿರುವುದರಿಂದ ಜಲ್ಲಿ ಕಲ್ಲು ಹಾಕಿರುವ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದೆ.
ಒಂದು ಕಿ.ಮೀನಷ್ಟು ಕಚ್ಚಾ ರಸ್ತೆ ಇದ್ದು, ಈಚೆಗೆ ಸುರಿದ ಮಳೆಯಿಂದಾಗಿ ರಸ್ತೆ ಕೆಸರುಮಯವಾಗಿದೆ. ಬೈಕ್ ಸವಾರರು ಜಾರಿ ಬೀಳುವಂತಾಗಿದೆ. ಅರಣ್ಯ ಇಲಾಖೆಯ ಆಕ್ಷೇಪ ಪರಿಹರಿಸಿ, ಬೇಗ ರಸ್ತೆ ನಿರ್ಮಿಸಿಕೊಡಬೇಕು ಎಂದು ಖಾಜಿ ಬೂದಿಹಾಳ ಗ್ರಾಮಸ್ಥರಾದ ಇಮ್ತಿಯಾಜ್ ಖಾಜಿ, ಇಸ್ಮಾಯಿಲ್ ಖಾಜಿ, ಯಲ್ಲಪ್ಪ ಹಡಪದ, ಸಿಕಂದರ ಖಾಜಿ ಆಗ್ರಹಿಸಿದ್ದಾರೆ.
ಜಲ್ಲಿಕಲ್ಲು ಹಾಕಿ ಬಿಡಲಾಗಿದೆ. ಅವುಗಳು ಎದ್ದಿರುವುದರಿಂದ ವಾಹನಗಳ ಟೈರ್ ಹಾಳಾಗುತ್ತಿದೆ. ಮಳೆ ಬಂದಿರುವುದರಿಂದ ಕೆಸರುಮಯವಾಗಿದೆ. ಆ ಮಾರ್ಗದಲ್ಲಿ ಸಂಚರಿಸುವುದೇ ಸವಾಲಿನ ಕೆಲಸವಾಗಿದೆ. ಕೂಡಲೇ ರಸ್ತೆ ನಿರ್ಮಿಸಿದರೆ ಜನರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.
‘ನಿಯಮಗಳ ಪ್ರಕಾರ 1980ಕ್ಕಿಂತ ಮುಂಚೆ ಅರಣ್ಯ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ರಸ್ತೆಯಲ್ಲಿ ಹೊಸ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ಅನುಮತಿ ಕಡ್ಡಾಯ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
‘ಡಾಂಬರೀಕರಣದ ಕಾಮಗಾರಿಯನ್ನು ವರ್ಷದ ಹಿಂದೆ ಆರಂಭಿಸಲಾಗಿದೆ. ಅರ್ಧದಷ್ಟು ಕಾಮಗಾರಿ ಮಾಡಲಾಗಿದ್ದು, ಅರಣ್ಯ ಇಲಾಖೆಯ ಸೂಚನೆ ಮೇರೆಗೆ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡುವಂತೆ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ಕೂಡಲೇ ಕಾಮಗಾರಿ ಮರಳಿ ಆರಂಭಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ವೈ.ಎಫ್. ಆಡಿನ ತಿಳಿಸಿದರು.
‘ಅರಣ್ಯ ಇಲಾಖೆಗೆ ಸಂಬಂಧಿಸಿದ ರಸ್ತೆಯಾಗಿರುವುದರಿಂದ ರಸ್ತೆ ಮಾಡಲು ಅರಣ್ಯ ಇಲಾಖೆಗೆ ಇ-ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಅನುಮತಿ ಪಡೆಯದ್ದರಿಂದ ಕಾಮಗಾರಿ ನಿಲುಗಡೆ ಮಾಡಲಾಗಿದೆ’ ಎಂದು ಬಾದಾಮಿ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಮಹೇಶ ಮರಿಯಣ್ಣವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.