
ರಾಂಪುರ: ಆರೋಗ್ಯ ಪೂರ್ಣ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವ ಸಮುದಾಯ ದುಶ್ಚಟಗಳಿಂದ ದೂರವಿರಬೇಕು ಎಂದು ಸ್ಥಳೀಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಅಜೀತ ನಾಗರಾಳೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ನಶಾ ಮುಕ್ತ ಭಾರತ ಅಭಿಯಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆ ಬದುಕಿಗೆ ಮಾರಕವಾಗುತ್ತದೆ ಎಂಬುದರ ತಿಳುವಳಿಕೆ ಪ್ರತಿಯೊಬ್ಬ ಯುವಕರಲ್ಲಿ ಬರಬೇಕಿದೆ ಎಂದರು.
ದುಶ್ಚಟಗಳು ನಮ್ಮ ದೇಹ ಮತ್ತು ಮನಸ್ಸನ್ನು ವಿನಾಶದತ್ತ ಕೊಂಡೊಯ್ಯುತ್ತವೆ. ಈ ನಿಟ್ಟಿನಲ್ಲಿ ಯುವ ಸಮೂಹ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಆರೋಗ್ಯಪೂರ್ಣ ಜೀವನ ಸಾಗಿಸಬೇಕು. ಇದರಿಂದ ಆರೋಗ್ಯವಂತ ಸಮಾಜವೂ ನಿರ್ಮಾಣವಾಗುತ್ತದೆ ಎಂದು ನಾಗರಾಳೆ ಹೇಳಿದರು.
ಅತಿಥಿಗಳಾಗಿದ್ದ ರಾಂಪುರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಮೇಟಿ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ವ್ಯಕ್ತಿಯ ಬದುಕಿನ ಮೇಲೆ ದುಷ್ಪರಿಣಾಮವುಂಟಾಗುತ್ತದೆ. ಇದರ ಅರಿವು ಪ್ರತಿ ಯುವಕರಿಗೆ ಆಗಬೇಕಿದೆ ಎಂದರು.
ಗ್ರಾಮ ಪಂಚಾಯತಿ ವತಿಯಿಂದ ವ್ಯಸನಮುಕ್ತ ಸಮಾಜದ ತಿಳುವಳಿಕೆ ಕುರಿತು ಮಾಹಿತಿ ನೀಡಲಾಯಿತಲ್ಲದೇ, ಕಾಲೇಜಿನ ಎನ್.ಎಸ್.ಎಸ್ ಘಟಕದ ಸಂಚಾಲಕ ಚನ್ನಮಲ್ಲಯ್ಯ ಹಿರೇಮಠ ವಿದ್ಯಾರ್ಥಿಗಳಿಗೆ ನಶಾ ಮುಕ್ತ ಸಮಾಜ ನಿರ್ಮಾಣ ಸಂಕಲ್ಪದ ಪ್ರತಿಜ್ಞಾವಿಧಿ ಬೋಧಿಸಿದರು.
ಡಾ.ಶಾರದಾ ನಿಂಬರಗಿ, ಕರಡಿ, ಅಕ್ಷತಾ ಚಿಮ್ಮಲಗಿ, ಲಕ್ಷ್ಮೀ ರಾಠೋಡ, ಡಾ.ಆನಂದಕುಮಾರ, ಆರ್.ಆರ್.ದೊರೆಗೋಳ, ಎಂ.ಎಸ್.ಕೊಪ್ಪದ, ರೂಪಾ ಥೋರತ್, ಕವಿತಾ ಮಠದ, ಡಾ.ಗೀತಾ ನಾಯ್ಕ ಗುರುದೇವರ ಮಠದ ಸಾವಿತ್ರಮ್ಮ, ರಿಯಾಜ್ ದಣ್ಣೂರ, ಚಂದ್ರಶೇಖರ ಹಂಗರಗಿ, ರಾಘವೇಂದ್ರ ಜುಂಜಾ, ಮಹೇಶ ಗಬ್ಬೂರ, ಸಿದ್ದು ಕುಂಬಾರ, ಭೀಮಣ್ಣ ಡೋಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.