ಬಾದಾಮಿ: ಸಮೀಪದ ಬನಶಂಕರಿದೇವಿ ಜಾತ್ರೆಯ ರಥೋತ್ಸವವು ಬನದ ಹುಣ್ಣಿಮೆ ದಿನವಾದ ಜ.13 ರಂದು ಸಂಜೆ 5ಕ್ಕೆ ನಡೆಯಲಿದೆ.
ಉತ್ತರ ಕರ್ನಾಟಕದಲ್ಲಿ ತಿಂಗಳವರೆಗೆ ನಡೆಯುವ ದೊಡ್ಡಜಾತ್ರೆಯಾಗಿದೆ. ಸುತ್ತಲಿನ ಭಕ್ತರು ದೇವಿಯ ಜಾತ್ರೆಯನ್ನು ನಾಡಹಬ್ಬದಂತೆ ಆಚರಿಸುವರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಗೋವಾದಿಂದ ಅಸಂಖ್ಯಾತ ಭಕ್ತರು ಸಾಗರೋಪಾದಿಯಲ್ಲಿ ಬರುವರು.
ಬನಶಂಕರಿದೇವಿಗೆ ಪೌರಾಣಿಕವಾಗಿ ‘ಶಾಖಾಂಬರಿ’ ಎಂದು ಸ್ಕಂದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಮಳೆಯಾಗದೇ ಭೀಕರ ಬರ ಬಿದ್ದು ಲೋಕವೆಲ್ಲ ತತ್ತರಿಸುವಾಗ ಜೀವಿಗಳನ್ನು ಸಂತೈಸಲು ದೇವಿ ತನ್ನ ತನುವಿನಿಂದ ಸಸ್ಯವನ್ನು ಸೃಷ್ಟಿಸಿದಳೆಂದು ಉಲ್ಲೇಖಿಸಲಾಗಿದೆ. ಆದ್ದರಿಂದ ರಥೋತ್ಸವದ ಹಿಂದಿನ ದಿನ ದೇವಿಗೆ 108 ಬಗೆಯ ತರಕಾರಿ ಸಸ್ಯವನ್ನು ಉಡುಗೆಯನ್ನಾಗಿ ಇರಿಸುವರು. ಇದಕ್ಕೆ ವನದುರ್ಗಾಹೋಮ ಎಂದು ಕರೆಯುವರು. ಸುತ್ತಲಿನ ಭಕ್ತರು ಪಲ್ಯೇದ ಹಬ್ಬ ಎಂದು ಆಚರಿಸುವರು.
ದೇಗುಲದ ಇತಿಹಾಸ: ಬಾದಾಮಿ ಸಮೀಪದ ಚೊಳಚಗುಡ್ಡ ಗ್ರಾಮದ ಬೆಟ್ಟಗುಡ್ಡದ ಮಡಿಲಿನಲ್ಲಿ ಆದಿಶಕ್ತಿ ಬನಶಂಕರಿ ದೇವಾಲಯವನ್ನು ನಿರ್ಮಿಸಲಾಗಿದೆ. ಗುಡಿಯ ಸುತ್ತ ಬಾಳೆ, ವೀಳ್ಯದ ಎಲೆಬಳ್ಳಿ, ತೆಂಗು ಮತ್ತು ಕಬ್ಬಿನ ತೋಟಗಳ ನಿಸರ್ಗ ಸೌಂದರ್ಯದಲ್ಲಿ ಬನದೇವಿ ಆದಿಶಕ್ತಿ ಬನಶಂಕರಿದೇವಿಯನ್ನು ಪ್ರತಿಷ್ಠಾಪಿಸಲಾಗಿದೆ.
ದೇವಾಲಯದ ಸಮೀಪ ತೈಲ ಪುಷ್ಕರಣಿ, ಸರಸ್ವತಿ ಹಳ್ಳ, ಚಿಕ್ಕ ಪುಷ್ಕರಣಿ ಎದುರಿಗೆ ಸುತ್ತಲೂ ಮಂಟಪವುಳ್ಳ ವಿಶಾಲವಾದ ಹರಿದ್ರಾತೀರ್ಥ ಪುಷ್ಕರಣಿ ಮತ್ತು ಮೂರು ಅಂತಸ್ತಿನ ದೀಪಸ್ತಂಭವನ್ನು ಕಾಣಬಹುದಾಗಿದೆ.
17ನೇ ಶತಮಾನದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡ ದೇವಾಲಯವು ಮಹಾದ್ವಾರದಿಂದ ಪ್ರವೇಶಿಸಿದಾಗ ದೀಪಸ್ತಂಭಗಳು, ಮುಖಮಂಟಪ, ಸಭಾ ಮಂಟಪ, ಗರ್ಭಗುಡಿಯಲ್ಲಿ ಬನಶಂಕರಿದೇವಿ ಸಿಂಹಾರೂಢಳಾಗಿ ಕಂಗೊಳಿಸುತ್ತಾಳೆ. ದೇವಾಲಯದ ಪಕ್ಕದಲ್ಲಿ ಬಸವಣ್ಣ ದೇವಾಲಯ, ಸುತ್ತ ನಾಲ್ಕು ದ್ವಾರಗಳನ್ನು ನಿರ್ಮಿಸಲಾಗಿದೆ.
ಅನ್ನಪೂರ್ಣೆಯರು: ಜಾತ್ರೆಗೆ ಬಂದ ಭಕ್ತರಿಗೆ ಕಡಿಮೆ ಬೆಲೆಯಲ್ಲಿ ಊಟವನ್ನು ಕೊಡುವ ಅನ್ನಪೂರ್ಣೆಯರ ದಂಡನ್ನು ಕಾಣಬಹುದು. ಮಹಿಳೆಯರು ಮನೆಯಲ್ಲಿ ತಾಯಿಯಂತೆ ಊಟವನ್ನು ಬಡಿಸುವರು. ಯಾತ್ರಿಕರು ಊಟವನ್ನು ಸವಿಯುವರು.
ಜಾತ್ರೆಯಲ್ಲಿ ವಿಶೇಷವಾಗಿ ಗೋಮಯದಿಂದ ಮಾಡಿದ ಗೊಂಬೆಗಳ ಮಾರಾಟ ರಥೋತ್ಸವದ ದಿನ ರಥದ ಬಯಲಿನಲ್ಲಿ ಲಭ್ಯವಾಗುತ್ತವೆ. ಗೊಂಬೆಯನ್ನು ಕೊಟ್ಟವರಿಗೆ ಮತ್ತು ಪಡೆದವರಿಗೆ ಬೇಗ ಮದುವೆ ಮತ್ತು ಮಕ್ಕಳಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಗೊಂಬೆಗಳ ಮಾರಾಟ ಒಂದೆರಡು ದಿನ ಮಾತ್ರ ನಡೆಯುತ್ತದೆ.
ಜಾತ್ರೆಯಲ್ಲಿ ವಿಶೇಷವಾಗಿ ವೈವಿಧ್ಯಮಯ ಕರಕುಶಲ ಕಲೆಯನ್ನು ಹೊಂದಿದ ಹೊಳೆಆಲೂರಿನ ಬಾಗಿಲು ಚೌಕಟ್ಟುಗಳು ‘ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೇ ‘ ಎಂದು ಕವಿ ವಾಣಿಯಂತೆ ನಿಮ್ಮನ್ನು ಸ್ವಾಗತಿಸುತ್ತಿವೆ. ಜಾತ್ರೆಯಲ್ಲಿ ಸಾವಿರಾರು ಅಂಗಡಿಗಳು ಸಿಂಗಾರಗೊಂಡು ವರ್ತಕರು ವ್ಯಾಪಾರಕ್ಕೆ ಸಿದ್ಧತೆಯಾಗಿದ್ದಾರೆ.
ಪತಿ ಮನೆಗೆ ತೆರಳಿದ ಮಹಿಳೆಯರು, ಬೀಗರು ಜಾತ್ರೆಗೆ ಬರುವರು ಜಾತ್ರೆಗೆ ಮುನ್ನವೇ ಮನೆಯಲ್ಲಿ ಮಹಿಳೆಯರು ಖಡಕ್ ಸಜ್ಜೆ, ಜೋಳದ ರೊಟ್ಟಿ, ವೈವಿಧ್ಯಮಯ ಚಟ್ನಿ, ಶೇಂಗಾ ಹೋಳಿಗೆ ಮತ್ತು ಕರಚಿಕಾಯಿ ಸಂಭ್ರಮದಿಂದ ತಯಾರು ಮಾಡುತ್ತಿದ್ದಾರೆ. ಐದು ದಿನಗಳ ವರೆಗೆ ಮನೆಯಲ್ಲಿ ಸಿಹಿ ಪದಾರ್ಥದ ಅಡುಗೆಯ ಸವಿಯುವರು.
ಜಾತ್ರೆಯಲ್ಲಿ ನಾಟಕೋತ್ಸವ ವೈವಿಧ್ಯಮಯ ಅಂಗಡಿಗಳು ಉತ್ತರ ಕರ್ನಾಟಕದಲ್ಲಿ ದೊಡ್ಡ ಜಾತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.