ADVERTISEMENT

ಬಾಗಲಕೋಟೆ| ರಸ್ತೆ ಸುರಕ್ಷತಾ ನಿಯಮ ಪಾಲಿಸಿ: ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:53 IST
Last Updated 10 ಜನವರಿ 2026, 6:53 IST
<div class="paragraphs"><p>ಬಾಗಲಕೋಟೆಯಲ್ಲಿ ಶುಕ್ರವಾರ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ&nbsp; ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಪಾಲ್ಗೊಂಡಿದ್ದರು</p></div>

ಬಾಗಲಕೋಟೆಯಲ್ಲಿ ಶುಕ್ರವಾರ ನಡೆದ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ  ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಪಾಲ್ಗೊಂಡಿದ್ದರು

   

ಬಾಗಲಕೋಟೆ: ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು. 

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಹನ ಚಾಲಕರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸದೇ, ಸುರಕ್ಷಿತವಾಗಿ ವಾಹನ ಚಾಲನೆ ಮಾಡಿದಲ್ಲಿ ಅಮೂಲ್ಯ ಜೀವಗಳ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ವಾಯವ್ಯ ಸಾರಿಗೆ ಸಂಸ್ಥೆಗಳ ಬಸ್ ಚಾಲಕರು ನಿಲುಗಡೆ ಸ್ಥಳಗಳಲ್ಲಿಯೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ಕಬ್ಬಿನ ಕಾರ್ಖಾನೆ ಮಾಲಿಕರು ಕೂಡ ತಮ್ಮ ಕಾರ್ಖಾನೆಗಳಿಗೆ ಬರುವ ಟ್ರ್ಯಾಕ್ಟರ್ ಮತ್ತು ಎತ್ತಿನ ಬಂಡಿಗಳು ರಸ್ತೆ ಬದಿ ಅಥವಾ ನಡು ರಸ್ತೆಯಲ್ಲಿ ನಿಲ್ಲಿಸದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ವಿಮೆ ಮಾಡಿಸಿರುವ ಟ್ರ್ಯಾಕ್ಟರ್‌ಗಳಿಗೆ ಮಾತ್ರ ಒಳಗಡೆ ಪ್ರವೇಶ ಎಂಬ ನಿಯಮ ಪಾಲಿಸಿದಲ್ಲಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲು ಸಕ್ಕರೆ ಕಾರ್ಖಾನೆಯವರು, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದರು.

ಪುರಸಭೆ, ನಗರಸಭೆ, ಸ್ಥಳಿಯ ಪ್ರಾಧಿಕಾರದ ಅಧಿಕಾರಿಗಳು ಚರಂಡಿ, ಒಳಚರಂಡಿ, ನಳಗಳ ಸಂಪರ್ಕ ಕಾಮಗಾರಿಗಳಿಗಾಗಿ ರಸ್ತೆ ಅಗೆದಿದ್ದಲ್ಲಿ, ಅವುಗಳನ್ನು ಮೊದಲಿನಂತೆ ಸರಿಪಡಿಸಬೇಕು.ಅಂತಹ ಕಾಮಗಾರಿಗಳಿಂದಾಗಿ ಅಪಘಾತ ಸಂಭವಿಸಿ ಜೀವ ಹಾನಿಯಾದಲ್ಲಿ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸಿ  ಎಂದು ಹೇಳುವುದು ಕೇವಲ ಪೊಲೀಸ್ ಇಲಾಖೆಯದ್ದು ಮಾತ್ರವಲ್ಲ, ಎಲ್ಲ ಇಲಾಖೆಗಳು ಮಾಡಬೇಕಾಗುತ್ತದೆ. ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ಗಂಟೆಯ ರಸ್ತೆ ಸುರಕ್ಷತಾ ನಿಯಮ ಪಾಲಿಸುವ ಕುರಿತು ಹದಿನೈದು ದಿನಕೊಮ್ಮೆಯಾದರೂ ಪಾಠ ಬೋಧಿಸಬೇಕು ವಿದ್ಯಾರ್ಥಿಗಳಿಗೆ ಮನವರಿಕೆಯಾಗುತ್ತದೆ. ಆ ಮಕ್ಕಳು ಮನೆಯ ಸದಸ್ಯರು ಹಾಗೂ ಪಾಲಕರಿಗೆ ಹೇಳಿದರೆ ಎಲ್ಲರಿಗೂ ಅರಿವು ಮೂಡುತ್ತದೆ ಎಂದು ಹೇಳಿದರು. 

ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ದುರ್ಗಾದಾಸ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.