
ಬಾಗಲಕೋಟೆ: ‘ಸ್ವಂತಕ್ಕಾಗಿ ಬದುಕದೇ ಸರ್ವರಿಗಾಗಿ ಬದುಕುವವರೇ ಸಂತರು. ಸಂತರಲ್ಲಿ ತ್ಯಾಗ, ಮಾತೃ, ಪ್ರೇಮಮಯಿ ಗುಣಗಳಿರುತ್ತವೆ. ದೂರದೃಷ್ಟಿಕೋನವುಳ್ಳ ಸಂತರು ಸರ್ವಕಾಲಕ್ಕೂ ಸರ್ವಶ್ರೇಷ್ಠರಾಗುತ್ತಾರೆ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಭೋವಿ ಗುರುಪೀಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶರಣಬಸವ ಸ್ವಾಮೀಜಿಯವರ 17ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಶ್ರಮಿಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಧ್ಯೇಯ ಸವಾಲಿನಿಂದ ಕೂಡಿರುತ್ತದೆ. ಶ್ರಮಿಕ ಸಮಾಜವು ವ್ಯಸನಮುಕ್ತ ಜೀವನ, ಮೂಢನಂಬಿಕೆ, ಕಂದಚಾರ ರಹಿತ ಧಾರ್ಮಿಕತೆ, ಆರ್ಥಿಕ ಸದೃಢತೆ ನೀತಿ ಹೊಂದಿದ್ದರೆ ಮಾತ್ರ ಅಭಿವೃದ್ಧಿ ಕಡೆ ಸಾಗಲು ಸಾಧ್ಯ. ಸದೃಢ ಸಮಾಜ ಸಂಘಟನೆ ಶರಣಬಸವ ಶ್ರೀಗಳ ಸಂಕಲ್ಪವಾಗಿತ್ತು’ ಎಂದು ತಿಳಿಸಿದರು.
ಸಂಸ್ಕೃತ ಉಪನ್ಯಾಸಕ ಮಾಗಡಿ ರಾಜಣ್ಣ ಮಾತನಾಡಿ, ‘ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದರು.
ಮುಖಂಡ ಅಶೋಕ ಲಿಂಬಾವಳಿ ಮಾತನಾಡಿ, ‘ಒಳ ಮೀಸಲಾತಿಯಿಂದ ಸಮಾಜಕ್ಕೆ ಅನ್ಯಾಯವಾಗಿದೆ. ಯುವಕರಿಗೆ ನೌಕರಿ ಸಿಗುವುದು ದುಸ್ತರವಾಗಿದೆ. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡಬೇಕಿದೆ’ ಎಂದು ಹೇಳಿದರು.
ಮುಖಂಡ ಸಿದ್ದರಾಮ ದಂಡಲ್ಕೂರ ಮಾತನಾಡಿದರು. ಸಿದ್ದು ಬಂಡಿ, ಮಾಗಡಿ ರಾಜಣ್ಣ, ಕಮಲಪ್ಪ ಜಾಲಿಹಾಳ, ಹುಲ್ಲಪ್ಪ ಹಳ್ಳೂರು, ಗಿಡ್ಡಪ್ಪ ಬಂಡಿ, ರಾಮು ಹೊಸಪೇಟೆ, ತಿಪ್ಪಣ್ಣ ಒಡೆಯರ್ ಇದ್ದರು.
ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಇಬ್ಬರು ಬಡ ವಿದ್ಯಾರ್ಥಿಗಳಿಗೆ ₹3 ಲಕ್ಷ ಸಹಾಯ ಧನವನ್ನು ಭೋವಿ ಗುರುಪೀಠದಿಂದ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.