
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಗೆಲುವು ತಂದುಕೊಡಲು ಮುಖಂಡರು, ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಉಪಚುನಾವಣೆ ಕುರಿತು ಸಮಾಲೋಚನೆ ನಡೆಸಿದ ಅವರು, ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ನೀವು ಗೆಲ್ಲಿಸಲು ಮುಂದಾಗಿ ಎಂದರು.
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಗರವೂ ಸೇರಿದಂತೆ ಎಷ್ಟು ಹಳ್ಳಿಗಳು ಬರುತ್ತವೆ. ಪಕ್ಷದ ಸಂಘಟನೆ ಹೇಗಿದೆ ಸೇರಿದಂತೆ ವಿವಿಧ ಮಾಹಿತಿಯನ್ನು ಪಡೆದುಕೊಂಡರು.
ಮುಖಂಡ ಚಂದ್ರಶೇಖರ ರಾಠೋಡ ಮಾತನಾಡಿ, ಚುನಾವಣೆಯಲ್ಲಿ ಎದುರಾಳಿ ಪಕ್ಷದ ನಾಯಕರ ವಿರುದ್ಧ ಹೊಡೆದಾಡಿ ಗೆಲ್ಲಿಸಿರುತ್ತವೆ. ಆದರೆ, ಸರ್ಕಾರ ರಚನೆಯಾಗಿ ಎರಡೂವರೆ ವರ್ಷಗಳಾದರೂ ನಾಮನಿರ್ದೇಶನ ಮಾಡಿಲ್ಲ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.
ಮುಖಂಡ ದ್ಯಾಮಣ್ಣ ಗಾಳಿ ಮಾತನಾಡಿ, ಬಹಳ ವರ್ಷಗಳಿಂದ ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಬಿಜೆಪಿ ಕೋಟೆಯಾಗಿತ್ತು. ಮೇಟಿ ಅವರು ತಮ್ಮ ಅನುಭವ, ಸಂಘಟನೆ ಮೂಲಕ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲುವು ಸಾಧಿಸಿದ್ದರು. ಅವರ ಕುಟುಂಬದವರಿಗೇ ಟಿಕೆಟ್ ನೀಡಬೇಕು ಎಂದು ಹೇಳಿದರು.
ಶಾಸಕ ಜೆ.ಟಿ. ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬುಡಾ ಅಧ್ಯಕ್ಷ ರಜಾಕ್ ಬೇನೂರ, ಮಾಜಿ ಸಚಿವ ಅಜಯಕುಮಾರ ಸರನಾಯಕ, ನಾಗರಾಜ ಹದ್ಲಿ, ಎಸ್.ಎನ್. ರಾಂಪುರ, ಶ್ರೀನಿವಾಸ ಬಳ್ಳಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.