ಹುನಗುಂದ: ತಾಲ್ಲೂಕಿನ ಚಿತ್ತವಾಡಗಿ ಗ್ರಾಮದಲ್ಲಿ ಮಳೆಯಾದರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೀರು ನಿಂತು, ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.
ಪ್ರತಿ ಮಳೆಗಾಲದಲ್ಲಿ ಜೋರು ಮಳೆ ಸುರಿದರೆ ಶಾಲೆಯ ಆವರಣದಲ್ಲಿ ಒಂದು ಅಡಿವರೆಗೂ ನೀರು ನಿಲ್ಲುತ್ತದೆ. ಈ ಮಳೆಗಾಲದಲ್ಲೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸಂಗ್ರಹಗೊಂಡ ನೀರಿನಲ್ಲಿ ನಡೆದುಕೊಂಡು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲಾ ಕೊಠಡಿಗಳಿಗೆ ಹೋಗಬೇಕಿದೆ. ನಿರಂತರವಾಗಿ ನೀರು ನಿಲ್ಲುವುದರಿಂದ ಅಲ್ಲಲ್ಲಿ ಹಸಿರು ಪಾಚಿ ಕಟ್ಟಿದ್ದು, ಯಾರಾದರೂ ಜಾರಿ ಬಿದ್ದರೆ ಅಪಾಯ ತಪ್ಪಿದ್ದಲ್ಲ.
ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸುವ ಸಿಬ್ಬಂದಿ ಸಹ ತೊಂದರೆಗೀಡಾಗಿದ್ದಾರೆ. ಹಸಿರು ಪಾಚಿ ಕಟ್ಟಿರುವುದರಿಂದ ಕ್ರಿಮಿ ಕೀಟಗಳ ಹಾವಳಿಯೂ ಹೆಚ್ಚಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ, ಕ್ರಮ ವಹಿಸದೇ ಇರುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರಗೆ ಒಟ್ಟು 65 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮೂವರು ಶಿಕ್ಷಕರಿದ್ದಾರೆ. ಅಂಗವಿಕಲ ಮಕ್ಕಳಿಗಾಗಿ ಒಂದು ಶೌಚಾಲಯವಿದೆ. ಬೇರೆ ಶೌಚಾಲಯ ಇಲ್ಲದ ಕಾರಣ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಅದನ್ನೇ ಬಳಸುತ್ತಿದ್ದಾರೆ. ಮೂತ್ರಾಲಯ ಇಲ್ಲದಿರುವುದರಿಂದ ಗಂಡು ಮಕ್ಕಳು ಶಾಲೆ ಆವರಣ ಹಾಗೂ ಹೊರಗಡೆ ಮೂತ್ರ ವಿಸರ್ಜನೆ ಮಾಡುವಂತಾಗಿದೆ.
ಇಷ್ಟು ಸಮಸ್ಯೆಗಳು ನಡುವೆ, ಶಾಲೆಯ ಆವರಣ ಸಹ ಜಲಾವೃತವಾಗುವುದು ತೀವ್ರ ಸಂಕಷ್ಟಕ್ಕೆ ದೂಡಿದೆ.
‘ಮಳೆ ಬಂದರೆ ಶಾಲೆಯ ಆವರಣದಲ್ಲಿ ಪದೇ ಪದೇ ನೀರು ನಿಲ್ಲುವುದರಿಂದ ವಿದ್ಯಾರ್ಥಿಗಳು ಆಟ ಆಡಲು ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗುತ್ತಿದೆ. ಆವರಣದಲ್ಲಿನ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಮುಖ್ಯಶಿಕ್ಷಕಿ ಎಸ್.ಐ. ಹೈದ್ರಾಬಾದ್, ಶಿಕ್ಷಕರಾದ ಬಿ.ಜಿ. ಗೌಡರ, ಪ್ರಶಾಂತ ಗಣಿ ತಿಳಿಸಿದರು.
ಶಾಲಾ ಆವರಣದಲ್ಲಿ ಅಂಗನವಾಡಿ:
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲೇ ಅಂಗನವಾಡಿ ಕೇಂದ್ರವಿದೆ. ಅಂಗನವಾಡಿಯಲ್ಲಿ ಕಲಿಯಲು ಪುಟಾಣಿ ಮಕ್ಕುಳು ಪೌಷ್ಟಿಕ ಆಹಾರ ಪದಾರ್ಥ ಪಡೆಯಲು ಗರ್ಭಿಣಿಯರು ಹಾಗೂ ಬಾಣಂತಿಯರು ಇಲ್ಲಿಗೆ ಬರುತ್ತಾರೆ. ಶಾಲಾ ಆವರಣದಲ್ಲಿ ನಿಲ್ಲುವ ನೀರು ಅವರನ್ನೂ ಬಾಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.