ಬಾದಾಮಿ: ಬಾಗಲಕೋಟೆ ಜಿಲ್ಲೆಯಲ್ಲಿಯೇ ಅತಿ ದೊಡ್ಡ ಕೆರೆಯಾಗಿರುವ ಕೆಂದೂರ ಕೆರೆ ಹೂಳೆತ್ತಲು ಸರ್ಕಾರದಿಂದ ಎರಡೂವರೆ ದಶಕದಿಂದ ಕಾಮಗಾರಿ ನಡೆದರೂ ಕೆರೆಗೆ ಹನಿ ನೀರು ಬಂದಿಲ್ಲ. ಜಾಲಿ ಗಿಡಗಳು ಕೆರೆಯನ್ನು ಆಪೋಷಣ ಮಾಡಿಕೊಂಡಿವೆ.
ಬಾದಾಮಿಯಿಂದ ಮಹಾಕೂಟ, ಪಟ್ಟದಕಲ್ಲು ಮತ್ತು ಐಹೊಳೆ ಸ್ಮಾರಕಗಳಿಗೆ ಹೋಗುವ ಸವದತ್ತಿ-ಅಮೀನಗಡ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕೆಂದೂರ ಗ್ರಾಮದ ಅನತಿ ದೂರದಲ್ಲಿ ಎಡಕ್ಕೆ ನೋಡಿದರೆ ಹಚ್ಚಹಸುರಿನ ಜಾಲಿಗಿಡಗಳ ಗುಂಪುಗಳ ಮಧ್ಯದಲ್ಲಿ ಮುಳುಗಿದೆ.
ಕೆರೆಯಲ್ಲಿ ನೀರು ಭರ್ತಿಯಾದರೆ ಭಾವಿಗಳ ಅಂತರ್ಜಲಮಟ್ಟ ಹೆಚ್ಚಾಗಿ ಸುತ್ತಲಿನ 10 ಗ್ರಾಮಗಳ ರೈತರಿಗೆ, ಜಾನುವಾರುಗಳಿಗೆ ಅನುಕೂಲವಾಗಲಿದೆ. ಕೆಂದೂರ ತಾಂಡೆಯ ಯುವಕರಿಗೆ ಮೀನುಸಾಕಾಣಿಕೆಯಿಂದ ಉದ್ಯೋಗ ಲಭಿಸಲಿದೆ ಎಂದು ಗ್ರಾಮಸ್ಥರು ಹೇಳಿದರು.
ಎರಡೂವರೆ ದಶಕಗಳ ಹಿಂದೆ ಇದೇ ಕೆರೆಯು ತನ್ನ ಒಡಲನ್ನು ತುಂಬಿಕೊಂಡು ನೀರಿನಲ್ಲಿ ಮೊಸಳೆ, ಹಾವು, ಮೀನು. ವೈವಿಧ್ಯಮಯ ಪಕ್ಷಿಗಳ ಕಲರವ ಮತ್ತು ಸಂತಾನೋತ್ಪತ್ತಿಗಾಗಿ ವಿದೇಶಗಳಿಂದ ಪಕ್ಷಿಗಳು ಇಲ್ಲಿಗೆ ಬರುತ್ತಿದ್ದವು. ಸುತ್ತ ಭತ್ತದ ಬೆಳೆಯಿಂದ ಹಸಿರಿನಿಂದ ಕಂಗೊಳಿಸುತ್ತಿತ್ತು. ಪ್ರವಾಸಿಗರು ಕಣ್ತುಂಬ ಕೆರೆಯ ಸೌಂದರ್ಯವನ್ನು ವೀಕ್ಷಿಸಿ ಹೋಗುತ್ತಿದ್ದರು.
ಕೆರೆಯ ಜಲಾನಯನ ಪ್ರದೇಶವು 64 ಚದುರ ಕಿ.ಮೀ ಇದ್ದು 65 ಲಕ್ಷ ದಶಲಕ್ಷ ಘನ ಅಡಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. 182 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯವನ್ನು ಪಡೆಯಬಹುದು. ಎಡದಂಡೆ ಕಾಲುವೆ 2.75 ಕಿ.ಮೀ, ಬಲದಂಡೆ ಕಾಲುವೆ ಉದ್ದ 1.60 ಕಿಮೀ ಇದೆ. ಕೆರೆ ಬತ್ತಿ ನೀರು ಹರಿಯದ ಕಾರಣ ಕಾಲುವೆಗಳು ಮುಚ್ಚಿವೆ ಎಂದು ರೈತರು ಹೇಳಿದರು.
‘2023-24, 2024-25ರಲ್ಲಿ ಬಾದಾಮಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಯಿಂದ ಎನ್.ಆರ್.ಜಿ ಕಾಮಗಾರಿ ನಡೆದಿವೆ. ಕೆಂದೂರ ₹76.72 ಲಕ್ಷ, ಹಲಕುರ್ಕಿ ₹1.25 ಕೋಟಿ, ನಂದಿಕೇಶ್ವರ ₹1 ಕೋಟಿ, ಪಟ್ಟದಕಲ್ಲು ₹55 ಲಕ್ಷ, ನೀಲಗುಂದ ₹55 ಲಕ್ಷ ಮತ್ತು ಆಡಗಲ್ ಗ್ರಾಮ ಪಂಚಾಯ್ತಿ ₹20 ಸಾವಿರ ವೆಚ್ಚಮಾಡಿದೆ‘ ಎಂದು ತಾಲ್ಲೂಕು ಪಂಚಾಯ್ತಿ ಇಒ ಸುರೇಶ ಮಾಕೊಂಡ ಪ್ರತಿಕ್ರಿಯಿಸಿದರು.
‘ಬಾದಾಮಿ ಮತ್ತು ಗುಳೇದಗುಡ್ಡ ತಾಲ್ಲೂಕಿನ ಅಂದಾಜು 20ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳು ಎನ್.ಆರ್.ಜಿ. ಯೋಜನೆಯಲ್ಲಿ ಕಾಮಗಾರಿ ಮಾಡಿವೆ. ಹೂಳೆತ್ತುವ ಕಾಮಗಾರಿಗೆ ಹಣ ಖರ್ಚು ಮಾಡಿದರೂ ಹೂಳು ಹೊರಹೋಗಿಲ್ಲ ’ ಎಂದು ಕೆಂದೂರ ಗ್ರಾಮ ಪಂಚಾಯ್ತಿ ಸದಸ್ಯ ಹೇಮಂತ ದೊಡಮನಿ ಮತ್ತು ರೈತ ಜಗದೀಶ ಹೇಳಿದರು.
ಪ್ರವಾಸಿಗರಿಗೆ ಆಕರ್ಷಕ ಪರಿಸರ ತಾಣ ನೀರಿನ ಸಂಗ್ರಹದಿಂದ ಅಂತರ್ಜಲಮಟ್ಟ ಅಧಿಕ ವಿದೇಶದಿಂದ ಹಕ್ಕಿಗಳು, ರೈತರಿಗೆ, ಯುವಕರಿಗೆ ಅನುಕೂಲ
ಕೆರೆಯಲ್ಲಿ ನೀರು ನಿಲ್ಲುವಂತೆ ಮಾಡಿ ಪ್ರವಾಸಿಗರಿಗೆ ಬೋಟಿಂಗ್ ವ್ಯವಸ್ಥೆ ಪಕ್ಷಿಧಾಮ ಮಾಡಿದರೆ ಪ್ರವಾಸಿ ಪರಿಸರ ತಾಣವಾಗುತ್ತದೆಂದು ಮುಖ್ಯಮಂತ್ರಿ ಮತ್ತು ಅರಣ್ಯ ಇಲಾಖೆ ಸಚಿವರಿಗೆ ವರ್ಷದ ಹಿಂದೆಯೇ ಮನವಿ ಸಲ್ಲಿಸಿದೆಎಸ್.ಎಚ್. ವಾಸನ ಅಧ್ಯಕ್ಷ ನಿಸರ್ಗ ಬಳಗ ಬಾದಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.