ರಾಂಪುರ: ಸಮೀಪದ ಶಿರೂರ ಪಟ್ಟಣದ ಆರಾಧ್ಯ ದೇವರಾದ ಸಿದ್ಧೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದರೂ ಯಾರೂ ಅದನ್ನು ದುರಸ್ತಿ ಮಾಡುವತ್ತ ಗಮನ ಹರಿಸುತ್ತಿಲ್ಲ.
ಐತಿಹಾಸಿಕ ಎರಡು ಬೃಹತ್ ಕೆರೆಗಳ ಮಧ್ಯದಲ್ಲಿರುವ ಸರಿಸುಮಾರು ಒಂದೂವರೆ ಕಿ.ಮೀಗಳಷ್ಟು ಉದ್ದದ ಈ ರಸ್ತೆ ಕಳೆದ 2-3 ವರ್ಷಗಳಿಂದ ಹಾಳಾಗಿದೆ. ಡಾಂಬರ್ ಕಿತ್ತು ಹೋಗಿ ಕಡಿ ಎದ್ದು ಜನರು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ನಿತ್ಯ ಅದರಲ್ಲೂ ಪ್ರತಿ ಸೋಮವಾರ ಬಹುತೇಕ ಇಡೀ ಪಟ್ಟಣದ ಭಕ್ತರು ಈ ರಸ್ತೆಯ ಮೂಲಕ ಸಿದ್ಧೇಶ್ವರ ದೇವಸ್ಥಾನ ಹಾಗೂ ಸಿದ್ಧೇಶ್ವರ ಮಠಕ್ಕೆ ತೆರಳಿ ದರ್ಶನ ಪಡೆಯುತ್ತಾರೆ. ಹಾಗೆಯೇ ಅಮಾವಸ್ಯೆ ಮತ್ತು ಜಾತ್ರೆಯ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ನಡೆದುಕೊಂಡೇ ಹೋಗುತ್ತಾರೆ. ರಸ್ತೆ ಹಾಳಾದ ಕಾರಣ ನಡೆದುಕೊಂಡು ಹೋಗಲು ಸಮಸ್ಯೆಯಾಗಿದೆ ಎಂದು ಜನ ದೂರಿದ್ದಾರೆ.
‘ಕೆರೆಗಳ ಮಧ್ಯ ಭಾಗದಲ್ಲಿರುವ ಈ ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ಮರಗಳು ಬೆಳೆದು ನಿಂತಿವೆ. ರಸ್ತೆಯುದ್ದಕ್ಕೂ ಗಿಡಗಳ ನೆರಳು ಜನರಿಗೆ ಆಹ್ಲಾದಕರ ವಾತಾವರಣ ನೀಡುತ್ತದೆ. ಬೆಳಗಿನ ವಾಯು ವಿಹಾರಕ್ಕೂ ಜನ ಈ ರಸ್ತೆಯಲ್ಲಿ ಓಡಾಡುತ್ತಾರೆ. ಹೀಗಾಗಿ ಈ ರಸ್ತೆ ಸುಧಾರಣೆಯಾಗಬೇಕು’ ಎನ್ನುವುದು ನಾಗರಿಕರ ಒತ್ತಾಯ.
‘ಸಣ್ಣ ನೀರಾವರಿ ಇಲಾಖೆಯವರಾಗಲಿ, ಸ್ಥಳೀಯ ಪಟ್ಟಣ ಪಂಚಾಯತಿಯವರಾಗಲಿ ಈ ರಸ್ತೆಯ ದುಃಸ್ಥಿತಿ ನೋಡಿ ದುರಸ್ತಿಗೆ ಕ್ರಮ ವಹಿಸಬೇಕಿದೆ. ದೇವಸ್ಥಾನ, ಮಠಕ್ಕೆ ತೆರಳುವ ಭಕ್ತರ ಭಾವನೆಗೆ ಸ್ಪಂದಿಸಿ ಸುಸಜ್ಜಿತ ರಸ್ತೆ ಮಾಡಿಕೊಡಬೇಕು. ಜೊತೆಗೆ ಮಾರ್ಗದುದ್ದಕ್ಕೂ ಅಲ್ಲಲ್ಲಿ ಸಿಮೆಂಟ್ ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಮಕ್ಕಳು, ವಯೋವೃದ್ಧ ಭಕ್ತರಿಗೆ ಬಹಳಷ್ಟು ಅನುಕೂಲವಾಗುತ್ತದೆ’ ಎನ್ನುತ್ತಾರೆ ಬಸು ಕೋಟಿಕಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.