ADVERTISEMENT

ರಾಜ್ಯದಲ್ಲಿ ನೆರೆ, ಅತಿವೃಷ್ಟಿ: ಕೇಂದ್ರ ಸರ್ಕಾರದ ಮೌನಕ್ಕೆ ಸಿದ್ದರಾಮಯ್ಯ ಕಿಡಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 11:52 IST
Last Updated 19 ಅಕ್ಟೋಬರ್ 2020, 11:52 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬಾಗಲಕೋಟೆ: ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿಲ್ಲ. ಕೇಂದ್ರ ಸರ್ಕಾರದಿಂದ ಬಿಡಿಗಾಸು ನೆರವು ದೊರೆತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬಾದಾಮಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷವೂ ಪ್ರಧಾನಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿರಲಿಲ್ಲ. ಈ ವರ್ಷ ಇನ್ನೂ ಮಳೆ ಬೀಳುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹದಿಂದ ಬಹಳಷ್ಟು ಹಾನಿಯಾಗಿದೆ. ಸಂಕಷ್ಟಕ್ಕೆ ತುತ್ತಾದ ಜನರು ಅನ್ನ-ಆಹಾರಕ್ಕೆ ಹಾಹಾಕಾರ ಪಡುತ್ತಿದ್ದಾರೆ. ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ಪರಿಹಾರ ಕೊಡುವ ಮನಸ್ಸು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ವರ್ಷದಷ್ಟು ಭೀಕರ ಪ್ರವಾಹ ಇಲ್ಲದಿದ್ದರೂ ಈ ವರ್ಷವೂ ಪ್ರವಾಹ ಬಂದಿದೆ. ಮನೆ ಹಾನಿಗಿಂತ ಬೆಳೆ ಹಾನಿ ಜಾಸ್ತಿಯಾಗಿದೆ. ಸರ್ಕಾರ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಬಿಡುಗಡೆ ಮಾಡಿರುವುದಾಗಿ ಹೇಳುತ್ತಿದೆ. ಆದರೆ ಇನ್ನೂ ಕೂಡಾ ಸಂತ್ರಸ್ತರಿಗೆ ಪರಿಹಾರ ಸರಿಯಾಗಿ ತಲುಪಿಲ್ಲ ಎಂದರು.

ಕಳೆದ ವರ್ಷ ಪ್ರವಾಹದಿಂದ ನನ್ನ ಪ್ರಕಾರ ₹1 ಲಕ್ಷ ಕೋಟಿ ಮೊತ್ತದ ಹಾನಿ ಸಂಭವಿಸಿದೆ. ರಾಜ್ಯ ಸರ್ಕಾರ ₹35 ಸಾವಿರ ಕೋಟಿ ಮೊತ್ತದ ಹಾನಿಯಾಗಿದೆ ಎಂದು ಕೇಂದ್ರಕ್ಕೆ ವರದಿ ಕೊಟ್ಟಿತ್ತು. ಆದರೆ ಕೇಂದ್ರ ಸರ್ಕಾರ ಬರೀ ₹1652 ಕೋಟಿ ಕೊಟ್ಟಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.