
ರಬಕವಿ ಬನಹಟ್ಟಿ: ಕಳೆದ ಬಾರಿಯ ಚುನಾವಣೆಯಲ್ಲಿ ತೇರದಾಳ ಮತಕ್ಷೇತ್ರದಲ್ಲಿ ಪರಾಜಿತಗೊಂಡ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಪ್ರಚಾರ ಪಡೆದುಕೊಳ್ಳಲು ಕ್ಷೇತ್ರದಲ್ಲಿಯ ಅಭಿವೃದ್ಧಿ ಕಾಮಗಾರಿ, ಇತರ ಯೋಜನೆಗಳಿಗೆ ನಾನೇ ಹಣ ಬಿಡುಗಡೆ ಮಾಡಿಸಿದ್ದು ಮತ್ತು ಮಂಜೂರು ಮಾಡಿಸಿದ್ದು ಎಂದು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಅವರಿಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ ಮುಖ್ಯಮಂತ್ರಿಗಳಿಂದ ₹25 ಕೋಟಿ ಅನುದಾನ ಬಿಡುಗಡೆ ಮಾಡಿಸಲಿ ಎಂದು ಶಾಸಕ ಸಿದ್ದು ಸವದಿ ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಂಗಳವಾರ ರಬಕವಿಯಲ್ಲಿ ನಡೆದ ಸುದ್ದಿಗೋಷ‍್ಠಿಯಲ್ಲಿ ಮಾತನಾಡಿದರು.
ಸೋಮವಾರ ಮಹೀಷವಾಡಿಗ ಬ್ಯಾರೇಜ್ ಕಾಮಗಾರಿಗೆ ಸರ್ಕಾರದಿಂದ ₹10 ಕೋಟಿ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಿದ್ದೇನೆ ಎಂದು ರಬಕವಿಯಲ್ಲಿ ಸನ್ಮಾನ ಮಾಡಿಸಿಕೊಂಡಿದ್ದಾರೆ. ಹೆಚ್ಚಿನ ಅನುದಾನಕ್ಕಾಗಿ ಎರಡು ತಿಂಗಳುಗಳ ಹಿಂದೆಯೇ ನಾನು ಸರ್ಕಾರಕ್ಕೆ ಈ ಕುರಿತು ಆಗ್ರಹಿಸಿದ್ದೇನೆ ಮತ್ತು ವಿಧಾನಸೌಧದಲ್ಲಿ ಚರ್ಚೆ ಮಾಡಿದ್ದೇನೆ. ಸರ್ಕಾರ ಕೇವಲ ಮಹೀಷವಾಡಗಿ ಸೇತುವೆಗೆ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿಯ ಅಂದಾಜು ನೂರು ಯೋಜನೆಗಳಿಗೆ ಹಣ ಬಿಡುಗಡೆ ಮಾಡಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ನೀಡಿದ ದಾಖಲೆಗಳನ್ನು ಪ್ರದರ್ಶನ ಮಾಡಿದರು.
ಇದೇ ಪ್ರವೃತ್ತಿಯನ್ನು ಕಾಂಗ್ರೆಸ್ ಮುಖಂಡರು ಮುಂದುವರೆಸಿಕೊಂಡು ಬಂದಿದ್ದೆ ಆದರೆ ಮುಂದಿನ ಚುನಾವಣೆಯಲ್ಲಿ ಮತದಾರರು ಅಂದಾಜು 25 ಸಾವಿರ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಪರಾಭವಗೊಳಿಸಲಿದ್ದಾರೆ ಎಂದು ಸವದಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಸವರಾಜ ತೆಗ್ಗಿ, ಮಹಾದೇವ ದೂಪದಾಳ ಮಾತನಾಡಿದರು. ಬಾಬಾಗೌಡ ಪಾಟೀಲ, ಶ್ರೀಶೈಲ ದಲಾಲ, ಸಂಜಯ ತೆಗ್ಗಿ, ಆನಂದ ಕಂಪು, ಸುರೇಶ ಅಕ್ಕಿವಾಟ, ಪ್ರಶಾಂತ ಪಾಲಭಾವಿ, ಶಿವಾನಂದ ಬಾಗಲಕೋಟಮಠ, ಯಲ್ಲಪ್ಪ ಕಟಗಿ, ಮಹಾದೇವ ಕೋಟ್ಯಾಳ, ಪ್ರಭು ಪಾಲಭಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.