ADVERTISEMENT

ರಬಕವಿ ಬನಹಟ್ಟಿ: ದೂಳು ತಿನ್ನುತ್ತಿವೆ ಸೈಜಿಂಗ್‌ ಘಟಕ

‌ತಮಿಳುನಾಡು, ಮಹಾರಾಷ್ಟ್ರ ಕಚ್ಚಾ ವಸ್ತು ಆಮದು ಸ್ಥಗಿತ

ವಿಶ್ವಜ ಕಾಡದೇವರ
Published 13 ಮೇ 2020, 20:00 IST
Last Updated 13 ಮೇ 2020, 20:00 IST
ಬನಹಟ್ಟಿಯಲ್ಲಿಯ ಸೈಜಿಂಗ್‌ ಘಟಕಗಳು ದೂಳು ತಿನ್ನುತ್ತಿವೆ
ಬನಹಟ್ಟಿಯಲ್ಲಿಯ ಸೈಜಿಂಗ್‌ ಘಟಕಗಳು ದೂಳು ತಿನ್ನುತ್ತಿವೆ   

ರಬಕವಿ ಬನಹಟ್ಟಿ: ಸೈಜಿಂಗ್‌ ಘಟಕ ಮತ್ತು ನೇಕಾರಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಬಿಟ್ಟು ಮತ್ತೊಂದಿಲ್ಲ. ಸೈಜಿಂಗ್‌ ಘಟಕವು ಭೀಮ್‌ಗಳನ್ನು ಪೂರೈಸದಿದ್ದರೆ ಮಗ್ಗಗಳು ನಡೆಯುವುದಿಲ್ಲ. ಮಗ್ಗಗಳು ಬಂದ್‌ ಆದರೆ ಭೀಮ್‌ಗಳನ್ನು ಕೇಳುವವರಿಲ್ಲದಂತಾಗುತ್ತದೆ.

ಈಗ ಕೋವಿಡ್‌–19 ಪ್ರಭಾವದಿಂದಾಗಿ ರಬಕವಿ–ಬನಹಟ್ಟಿ ನಗರಗಳಲ್ಲಿರುವ 18 ಸೈಜಿಂಗ್‌ ಘಟಕದಲ್ಲಿರುವ ಯಂತ್ರೋಪಕರಣಗಳು ದೂಳು ತಿನ್ನುತ್ತಿವೆ. ಎಂಟು ವಾರಗಳಿಂದ ಸೈಜಿಂಗ್‌ ಘಟಕಗಳು ಪೂರ್ತಿಯಾಗಿ ಕಾರ್ಯ ಸ್ಥಗಿತಗೊಳಿಸಿವೆ. ಅವುಗಳನ್ನು ನಂಬಿಕೊಂಡಿದ್ದ ಕಾರ್ಮಿಕರು, ನೇಕಾರರ ಮತ್ತು ಮಾಲೀಕರ ಪರಿಸ್ಥಿತಿ ಶೋಚನೀಯವಾಗಿದೆ.

ಒಂದು ಸೈಜಿಂಗ್‌ ಘಟಕದಲ್ಲಿ ಅಂದಾಜು 40 ರಿಂದ 50 ಮಂದಿ ದುಡಿಯುತ್ತಾರೆ. ಈಗ ಎರಡು ತಿಂಗಳಿಂದ ಘಟಕಗಳು ಬಂದ್‌ ಆಗಿದ್ದರಿಂದ ಈ ಎಲ್ಲ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಇನ್ನು ಮಾಲೀಕರ ಪರಿಸ್ಥಿತಿಯೂ ಬೇರೆಯಾಗಿಲ್ಲ. ಸೈಜಿಂಗ್‌ನಲ್ಲಿ ಲಕ್ಷಾಂತರ ಮೌಲ್ಯದ ಸೀರೆ ನೇಯ್ಗೆಗೆ ಬೇಕಾದ ಭೀಮ್‌ಗಳು ಕೂಡಾ ದೂಳು ತಿನ್ನುತ್ತಿವೆ. ಮಗ್ಗಗಳು ಬಂದ್ ಆಗಿರುವುದರಿಂದ ಭೀಮ್‌ಗಳನ್ನು ಕೇಳುವವರೇ ಇಲ್ಲ.

ADVERTISEMENT

ಭೀಮ್‌ಗಳನ್ನು ಸಿದ್ಧಪಡಿಸಲು ಮಾಲೀಕರು ಲಕ್ಷಾಂತರ ಹಣ ಕಚ್ಚಾ ವಸ್ತು ಮತ್ತು ಇನ್ನಿತರ ವಸ್ತುಗಳ ಮೇಲೆ ಹೂಡಿರುತ್ತಾರೆ. ಈಗ ಕಚ್ಚಾ ವಸ್ತುಗಳ ಹಣವೂ ಇಲ್ಲ. ಭೀಮ್‌ಗಳನ್ನು ಕೊಂಡವರು ಹಣ ಕೂಡ ನೀಡುತ್ತಿಲ್ಲ. ಇನ್ನೂ ಸೈಜಿಂಗ್‌ನಲ್ಲಿ ಹಾಗೇ ಉಳಿದುಕೊಂಡ ಭೀಮ್‌ಗಳು ಮಾಲೀಕರಿಗೆ ನಷ್ಟ ಉಂಟು ಮಾಡಿವೆ.

’ಇನ್ನೂ ಈ ಸೈಜಿಂಗ್‌ ಘಟಕಗಳು ಮತ್ತೆ ಆರಂಭವಾಗಬೇಕಾದರೆ ಇದಕ್ಕೆ ಕಚ್ಚಾ ವಸ್ತುಗಳು ಪೂರೈಕೆ ಆಗಬೇಕು. ಅವು ಮಹಾರಾಷ್ಟ್ರ, ತಮಿಳನಾಡು ಮತ್ತು ಗುಜರಾತ್‌ದಿಂದ ಬರಬೇಕು. ಈಗ ಅಲ್ಲಿಯ ಕಾರ್ಮಿಕರು ಕೋವಿಡ್‌ನಿಂದಾಗಿ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ್ದಾರೆ. ಇನ್ನೂ ಅವರು ಬಂದು ಕೆಲಸ ಆರಂಭಿಸಿದರೆ ಮಾತ್ರ ನಮಗೆ ಕಚ್ಛಾ ವಸ್ತುಗಳು ಪೂರೈಕೆಯಾಗುತ್ತದೆ. ಅಲ್ಲಿಯವರೆಗೆ ನಮ್ಮ ಸೈಜಿಂಗ್‌ಗಳ ಘಟಕಗಳು ಕಾರ್ಯ ಮಾಡಲಾರವು‘ ಎಂದು ಸೈಜಿಂಗ್ ಘಟಕದ ಕಾರ್ಯದರ್ಶಿ ಬ್ರಜ್‌ಮೋಹನ ಡಾಗಾ ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.