ADVERTISEMENT

ವ್ಯಕ್ತಿತ್ವ ವಿಕಸನಕ್ಕೆ ಕ್ರೀಡಾ ಚಟುವಟಿಕೆ ಅಗತ್ಯ: ಎಸ್.ಆರ್.ಪಾಟೀಲ

ಬಾಗಲಕೋಟೆ ವಿ.ವಿ ಅಂತರ ಕಾಲೇಜು ಕೊಕ್ಕೊ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 5:54 IST
Last Updated 20 ಫೆಬ್ರುವರಿ 2026, 5:54 IST
ಬಾಗಲಕೋಟೆ ವಿ.ವಿ ಅಂತರ ಕಾಲೇಜುಗಳ ಕೊಕ್ಕೊ ಪಂದ್ಯಾವಳಿಗೆ ಬಲೂನ ಹಾರಿಸುವ ಮೂಲಕ ಮಾಜಿ ಸಚಿವ ಎಸ್.ಆರ್.ಪಾಟೀಲ ಹಾಗೂ ವೀಣಾ ಕಾಶಪ್ಪನವರ ಚಾಲನೆ ನೀಡಿದರು
ಬಾಗಲಕೋಟೆ ವಿ.ವಿ ಅಂತರ ಕಾಲೇಜುಗಳ ಕೊಕ್ಕೊ ಪಂದ್ಯಾವಳಿಗೆ ಬಲೂನ ಹಾರಿಸುವ ಮೂಲಕ ಮಾಜಿ ಸಚಿವ ಎಸ್.ಆರ್.ಪಾಟೀಲ ಹಾಗೂ ವೀಣಾ ಕಾಶಪ್ಪನವರ ಚಾಲನೆ ನೀಡಿದರು   

ಬಾಗಲಕೋಟೆ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗದೊಂದಿಗೆ ಆರೋಗ್ಯಕರ ವ್ಯಕ್ತಿತ್ವ ರೂಪಿಸಿಕೊಳ್ಳಲು ಕ್ರೀಡಾ ಮನೋಭಾವನೆ ಬೆಳೆಸಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ಇಲ್ಲಿನ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ವಿಭಾಗದ ಸಹಯೋಗದಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಕೊಕ್ಕೊ ಪಂದ್ಯಾವಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ಕ್ರೀಡೆಯಿಂದ ದೈಹಿಕ, ಮಾನಸಿಕ ಗಟ್ಟಿತನದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ವಿಕಾಸ ಹೊಂದಲು ಸಹಕಾರಿ ಆಗುತ್ತದೆ ಎಂದು ಪಾಟೀಲ ಹೇಳಿದರು.

ADVERTISEMENT

ಮುಖ್ಯ ಅತಿಥಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು, ದೇಶ, ನಾಡಿನ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪಾತ್ರ ಬಹಳ ಮುಖ್ಯವಾಗಿದೆ. ಮೊಬೈಲನ್ನು ಜ್ಞಾನಕ್ಕಾಗಿ ಬಳಸಿ, ಅದರ ದಾಸರಾಗಬೇಡಿ. ಓದು, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಭಾರತೀಯ ಕ್ರೀಡಾ ಪರಂಪರಣೆಯನ್ನು ಉಳಿಸಿ ಬೆಳೆಸಬೇಕು ಎಂದರು.

ಸರ್ಕಾರಿ ನೌಕರ ಸಂಘದ ಕಾರ್ಯದರ್ಶಿ ವಿಠ್ಠಲ ವಾಲಿಕಾರ, ಬಾಗಲಕೋಟೆ ವಿಶ್ವವಿದ್ಯಾಲಯದ ಕ್ರೀಡಾ ಸಂಯೋಜಕ ಕೆ.ಎಂ.ಶಿರಹಟ್ಟಿ, ಪ್ರೊ.ಎಸ್.ಬಿ.ಚಳಗೇರಿ ಮಾತನಾಡಿದರು.

ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಅರುಣಕುಮಾರ ಗಾಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ. ವ್ಯಕ್ತಿತ್ವ ಬೆಳವಣಿಗೆಗೆ ಕ್ರೀಡಾ ಚಟವಟಿಕೆಗಳು ಅಗತ್ಯವಾಗಿವೆ ಎಂದರು.

ಐಕ್ಯೂಎಸಿ ಸಂಯೋಜಕ ಬಸವರಾಜ ಬೀಳಗಿ, ಬಸವರಾಜ ಅನಗವಾಡಿ, ಕ್ರೀಡಾ ನಿರ್ದೇಶಕ ನೀಲಪ್ಪ ಕುರಿ, ಸಂಪತ್ತ ಲಮಾಣಿ ವಂದಿಸಿದರು, ಸುಮಂಗಲಾ ಮೇಟಿ ಇದ್ದರು. ಪಂದ್ಯಾವಳಿಯಲ್ಲಿ 12ಕ್ಕೂ ಹೆಚ್ಚು ಮಹಾವಿದ್ಯಾಲಯಗಳ ಕೊಕ್ಕೊ ಕ್ರೀಡಾ ಪಟುಗಳು ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.