ADVERTISEMENT

ಯಡಿಯೂರಪ್ಪ ಕುಟುಂಬ ಪಂಚಮಸಾಲಿ ಸಮಾಜದ ವಿರೋಧಿಗಳಲ್ಲ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 14:44 IST
Last Updated 13 ಫೆಬ್ರುವರಿ 2022, 14:44 IST
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು.    

ಬಾಗಲಕೋಟೆ:‘ಯಡಿಯೂರಪ್ಪ ಕುಟುಂಬ ಪಂಚಮಸಾಲಿ ಸಮಾಜದ ವಿರೋಧಿ ಅಲ್ಲ. ನಮ್ಮ ತಂದೆಯೇ ಈ ಸಮಾಜಕ್ಕೆ ಪ್ರವರ್ಗ 3ಬಿ ಅಡಿ ಮೀಸಲಾತಿ ಕಲ್ಪಿಸಿದ್ದರು’ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ಭಾನುವಾರ ಪಂಚಮಸಾಲಿ ಸಮಾಜದ ಮೂರನೇ ಪೀಠದ ಜಗದ್ಗುರು ಡಾ.ಮಹಾದೇವ ಶಿವಾಚಾರ್ಯರ ಪೀಠಾರೋಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಲವು ತಿಂಗಳ ಹಿಂದೆ ನಮ್ಮ ತಂದೆ ಯಡಿಯೂರಪ್ಪ ಹಾಗೂ ನನ್ನನ್ನು ಪಂಚಮಸಾಲಿ ಸಮಾಜದ ವಿರೋಧಿಗಳು ಎಂಬಂತೆ ಬಿಂಬಿಸುವ ಕೆಲಸ ಕೆಲವರು ವ್ಯವಸ್ಥಿತವಾಗಿ ಮಾಡಿದ್ದರು ಎಂದು ಹೇಳಿದರು.

ADVERTISEMENT

ಸ್ವಾತಂತ್ರ್ಯಾನಂತರ ಪಂಚಮಸಾಲಿಗಳು ಸೇರಿದಂತೆ ಎಲ್ಲ ಸಮಾಜದವರನ್ನು ಒಗ್ಗೂಡಿಸುವ ಕೆಲಸ ಯಡಿಯೂರಪ್ಪ ಮಾಡಿದ್ದಾರೆ ಎಂದರು.

‘ನಾಲಿಗೆ ರುಚಿ ಬಿಟ್ಟರೆ ಆರೋಗ್ಯಕ್ಕೆ ಲಾಭ ವಾದ-ವಿವಾದಗಳನ್ನು ಬಿಟ್ಟರೆ ನಮ್ಮ ಸಂಬಂಧಕ್ಕೆ ಲಾಭ, ವ್ಯರ್ಥ ಚಿಂತನೆಗಳನ್ನು ಬಿಟ್ಟರೆ ಜೀವನಕ್ಕೆ ಲಾಭ’ಎಂದು ಮಾರ್ಮಿಕವಾಗಿ ವಿರೋಧಿಗಳಿಗೆ ಸಂದೇಶ ನೀಡಿದರು.

ಸಮಾಜ ಒಡೆದ ಆರೋಪ ಸಲ್ಲ:ಕೂಡಲಸಂಗಮ ಪಂಚಮಸಾಲಿ ಪೀಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರಭಣ್ಣ ಹುಣಶಿಕಟ್ಟಿ ಮಾತನಾಡಿ, ಹೊಸದಾಗಿ ಆರಂಭವಾಗಿರುವ ಮೂರನೇ ಪೀಠಕ್ಕೆ ಉಭಯ ಪೀಠಗಳೂ ಸಹಕಾರ ನೀಡುವಂತೆ ಕೋರಿದರು.

‘ಮೂರನೇ ಪೀಠ ಪಂಚಮಸಾಲಿ ಸಮಾಜವನ್ನು ಒಡೆಯುವುದಕ್ಕಲ್ಲ. ಬದಲಿಗೆ ಒಂದು ಮಾಡುವುದು ಆಗಿದೆ. ಹೀಗಾಗಿ ಸಮಾಜ ಒಡೆಯಲಾಗುತ್ತಿದೆ ಎಂದು ಹೇಳುವವರ ಮಾತನ್ನು ಯಾರೂ ನಂಬಬೇಡಿ. ವೀರಶೈವ-ಲಿಂಗಾಯತ ಪಂಚಮಸಾಲಿಗಳು ನಾವೆಲ್ಲರೂ ಒಂದೇ’ಎಂದು ಹೇಳಿದರು.

‘ಈ ಹಿಂದೆ ನಮ್ಮ ಸಮಾಜದಲ್ಲಿ ಯಾರೂ ಧಾರ್ಮಿಕ ಕೆಲಸ ಮಾಡಿರಲಿಲ್ಲ. ಈ ಪೀಠ ಆ ಕೆಲಸ ಮಾಡಲಿದೆ. ಮೂರು ಪೀಠದ ಶ್ರೀಗಳು ಒಬ್ಬರಿಗೊಬ್ಬರು ಒಗ್ಗಟ್ಟು, ಪರಸ್ಪರ ಸಹಕಾರದಿಂದ ಈ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯಬೇಕು’ಎಂದು ಕಿವಿಮಾತು ಹೇಳಿದರು.

ಸಮುದಾಯದ ಮುಖಂಡ ಬಸವರಾಜ ದಿಂಡೂರ ಮಾತನಾಡಿ, ಯಾವುದೇ ಕಾರಣಕ್ಕೂ 2ಎ ಮೀಸಲಾತಿ ಹಾಗೂ ಕೇಂದ್ರ ಸರ್ಕಾರದ ಮೀಸಲಾತಿ ಪಟ್ಟಿಯಲ್ಲಿ ಬಿಸಿಎಂಗೆ ಸೇರಿಸುವಂತೆ ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.