ADVERTISEMENT

ಬಾಗಲಕೋಟೆ | ಕಲ್ಲು ತೂರಾಟ: ಎಂಟು ಜನರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 9 ಮೇ 2024, 14:38 IST
Last Updated 9 ಮೇ 2024, 14:38 IST
   

ಬಾಗಲಕೋಟೆ: ನಗರಸಭೆ ವೃತ್ತದ ಬಳಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಎಂಟು ಜನರ ವಿರುದ್ಧ ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಾರಸ್ವಾಮಿ ಹಿರೇಮಠ, ವಿಕ್ರಮ ದೇಶಪಾಂಡೆ, ಮನೋಜ ಕರೋಡಿವಾಲಾ, ಪ್ರಕಾಶ ನಿರಂಜನ, ರಮೇಶ ಬಂಡಿವಡ್ಡರ, ಕುಮಾರ ಗಾಣಿಗೇರ, ನಾಗೇಶ ಅಂಬಿಗೇರ, ರಾಜು ನೀಲನಾಯಕ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಯಸ್ಕರಾದ ಬಾದಾಮಿಯ ಹಿಂದೂ ಸಮಾಜದ ಹುಡುಗ, ಮುಸ್ಲಿಂ ಸಮಾಜದ ಹುಡುಗಿ ಮದುವೆಯಾಗಿದ್ದು, ಮನೆಯವರ ವಿರೋಧ ವ್ಯಕ್ತವಾಗಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠರ ಕಚೇರಿಗೆ ಬಂದಿದ್ದರು. ಹಿಂದೂ ಜಾಗರಣ ವೇದಿಕೆ ಹಾಗೂ ಮುಸ್ಲಿಂ ಸಮಾಜದವರು ಅಲ್ಲಿಗೆ ಬರಲಿರುವುದರಿಂದ ಅವರನ್ನು ನವನಗರ ಠಾಣೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು ಎಂದು ದೂರಿನಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಪ್ರಕಾಶ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಠಾಣೆಗೆ ಬಂದ ಹಿಂದೂ ಜಾಗರಣ ವೇದಿಕೆ ಸದಸ್ಯರು ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಾರೆ ಎಂದು ಕೂಗಿ, ನಗರಸಭೆ ಕಡೆಗೆ ಹೋಗಿ ರಸ್ತೆ ತಡೆ ನಡೆಸುತ್ತಿದ್ದರು. ಇಬ್ಬರೂ ವಯಸ್ಕರಿದ್ದು ಮದುವೆಯಾಗಿದ್ದಾರೆ ಎಂದು ಹೇಳುತ್ತಿರುವಾಗ, ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ಬೈದು ಕಲ್ಲು ತೂರಾಡಿದರು. ಕಲ್ಲು ಬಡಿದು ಕಪಾಳಿಗೆ ಗಾಯವಾಗಿದೆ ಎಂದು ದೂರಿದ್ದಾರೆ.

ಪಿಎಸ್‌ಐ ಯಮನಪ್ಪ ಮಾಂಗ, ಸಿಬ್ಬಂದಿ ಪ್ರೇಮಸಿಂಗ್ ರಾಠೋಡ ಇತರರಿಗೂ ಕಲ್ಲು ಬಡಿದಿವೆ. ಸಿಬ್ಬಂದಿಯನ್ನು ಎಳೆದಾಡಿ ಗಾಯಗೊಳಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಗಲಾಟೆಯಲ್ಲಿ ಗಾಯಗೊಂಡಿರುವ ಕುಮಾರಸ್ವಾಮಿ ಹಿರೇಮಠ, ವಿಕ್ರಮ ದೇಶಪಾಂಡೆ, ಮನೋಜ ಕರೋಡಿವಾಲಾ, ನಾಗೇಶ ಅಂಬಿಗೇರ ಕುಮಾರೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.