ADVERTISEMENT

ಸ್ವಾವಲಂಬನೆಗೆ ದಾರಿಯಾದ ಬೆನ್ನುನೋವು!

ಮನೆಯಲ್ಲೇ ಕುಳಿತು ವಿದೇಶದ ಮಕ್ಕಳಿಗೆ ಪಾಠ ಮಾಡುವ ಜ್ಯೋತಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 16:30 IST
Last Updated 12 ಡಿಸೆಂಬರ್ 2019, 16:30 IST
ಆನ್ಲೈನ್ ಮೂಲಕ ಪಾಠ ಮಾಡುತ್ತಿರುವ ತೇರದಾಳದ ಜ್ಯೋತಿ ಮಲ್ಲಪ್ಪ ಬೀಳಗಿ.
ಆನ್ಲೈನ್ ಮೂಲಕ ಪಾಠ ಮಾಡುತ್ತಿರುವ ತೇರದಾಳದ ಜ್ಯೋತಿ ಮಲ್ಲಪ್ಪ ಬೀಳಗಿ.   


ತೇರದಾಳ: ಬೆನ್ನುಮೂಳೆ (ಸ್ಪೈನಲ್‌ ಕಾರ್ಡ್) ತೊಂದರೆಯಿಂದಾಗಿ ಪಟ್ಟಣದ ಜ್ಯೋತಿ ಮಲ್ಲಪ್ಪ ಬೀಳಗಿ ಮನೆಯಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ಪಾಠ ಮಾಡಿ ತಿಂಗಳಿಗೆ ಸಾವಿರಾರು ರೂಪಾಯಿ ಗಳಿಸುತ್ತಿದ್ದಾರೆ. 

ಜ್ಯೋತಿ ವಿಜ್ಞಾನ ವಿಭಾಗದಲ್ಲಿ ಪಿಯುಸಿ, ಡಿ.ಇಡಿ, ಬಿ.ಇಡಿ ಹಾಗೂ ಎಂ.ಎ ಕಲಿತಿದ್ದಾರೆ. ಕೆಲ ಕಾಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದು, ಬೆನ್ನುಮೂಳೆ ಬಾಧೆ ಬಹಳಷ್ಟು ಕಾಡಿಸತೊಡಗಿದ ಕಾರಣ ಹೊರಗೆ ಹೋಗಿ ಪಾಠ ಮಾಡುವುದನ್ನು ನಿಲ್ಲಿಸಿದ್ದರು. ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳಿದಾಗ ಅವರು ಹೆಚ್ಚು ಹೊತ್ತು ನಿಲ್ಲುವಂತಿಲ್ಲ ಎಂದು ಹೇಳಿ, ಆಗಾಗ ವಿಶ್ರಾಂತಿ ಪಡೆಯಲು ಸೂಚಿಸಿದ್ದರು.

ಹೈದರಾಬಾದ್ ಸಂಸ್ಥೆಯ ನೆರವು:

ADVERTISEMENT

ನೌಕರಿ ಡಾಟ್‌ ಕಾಮ್‌ನಲ್ಲಿ ಜ್ಯೋತಿ ಅವರ ಬಯೊಡೆಟಾ ನೋಡಿದ್ದ ಹೈದರಾಬಾದ್‌ನ ಟೀಚಿಂಗ್ ಸ್ಟಾಮರ್ ಎಂಬ ಕಂಪೆನಿ ಇವರ ಪ್ರೊಫೈಲ್ ಅಂಗೀಕರಿಸಿ, ಸಂದರ್ಶನಕ್ಕೆ ಹಾಜರಾಗುವಂತೆ ಮೇಲ್ ಕಳುಹಿಸಿತ್ತು. ಅದರಲ್ಲಿ ಮೋಸವಿರಬಹುದು ಎಂದು ಜ್ಯೋತಿ ಆರಂಭದಲ್ಲಿ ಸ್ಪಂದಿಸಿರಲಿಲ್ಲ. ನಂತರ ಬಹಳಷ್ಟ ಬಾರಿ ಪತ್ರ ವ್ಯವಹಾರದ ನಂತರ ಆನ್‌ಲೈನ್‌ ಮೂಲಕ ಪಾಠ ಮಾಡುವ ಅವಕಾಶ ಒದಗಿಬಂದಿತು.

ಅದಕ್ಕೂ ಮುನ್ನ ಕಂಪೆನಿಯಿಂದ ಆನ್‌ಲೈನ್‌ ಮೂಲಕವೇ ತರಬೇತಿ ಪಡೆದು ಒಪ್ಪಂದ ಮಾಡಿಕೊಂಡ ಜ್ಯೋತಿ, ಕೆಲಸ ಆರಂಭಿಸಿದರು. ಈಗ ಮನೆಯಲ್ಲೆ ಕುಳಿತು ₹35 ಸಾವಿರಕ್ಕೂ ಅಧಿಕ ವೇತನ ಪಡೆಯುತ್ತಿದ್ದಾರೆ.


ಏನಿದು ಆನ್ಲೈನ್ ಪಾಠ?:

ಅಮೇರಿಕ, ಸೌದಿ ಅರೇಬಿಯಾ, ರಷ್ಯಾ ಹಾಗೂ ಜರ್ಮನಿ ದೇಶಗಳ ಮಕ್ಕಳಿಗೆ  ಪಾಠ ಹೇಳಿಕೊಡಲು ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಪಾಠ ಹೇಳಿಕೊಟ್ಟ ನಂತರ ಅವರಿಗೆ ಆನ್‌ಲೈನ್‌ ಮೂಲಕವೇ ವೇತನ ನೀಡಲಾಗುತ್ತದೆ. ಇಲ್ಲಿ ಪಾಠ ಮಾಡಲು ಆಯ್ಕೆಯಾದವರ ಬಳಿ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇರಬೇಕು. ಇಂಗ್ಲಿಷ್‌ನಲ್ಲಿ ಜೀವಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಷಯಗಳನ್ನು ಟೆಕ್ಸ್ಟ್ ಟೈಪ್ ಮಾಡಿ ವಿವರಿಸುವ ಸಾಮರ್ಥ್ಯವಿರಬೇಕು.

ಟೀಚಿಂಗ್ ಸ್ಟೋಮರ್‌ನ ವೆಬ್‌ಸೈಟ್‌ನಲ್ಲಿ ಲಾಗಿನ್ ಆದರೆ ಅಲ್ಲೊಂದು ಸ್ಟಾಫ್ ರೂಂ ತೆರೆದುಕೊಳ್ಳುತ್ತದೆ, ಅಲ್ಲಿ ಮಾಹಿತಿ ತುಂಬಿದಾಗ, ವರ್ಗ ಕೋಣೆ ತೆರೆದುಕೊಳ್ಳುತ್ತದೆ. ಅಲ್ಲಿ ಶಿಕ್ಷಕರು ಟೆಕ್ಸ್ಟ್ ಟೈಪ್ ಮಾಡಲು ಬೇರೆ ಕಾಲಂ ಹಾಗೂ ಕಲಿಕಾರ್ಥಿ ಟೈಪ್ ಮಾಡಲು ಬೇರೆ ಕಾಲಂಗಳಿರುತ್ತವೆ. ಹೀಗೆ ಯಾವುದೇ ದೇಶದ ಮಗುವಿಗೆ ಇಲ್ಲಿಯೇ ಕುಳಿತು ಪಾಠ ಮಾಡಲಾಗುತ್ತದೆ. ವಿಶೇಷವೆಂದರೆ ಇಲ್ಲಿ ಒಮ್ಮೆ ಪಾಠಕ್ಕೆ ಸಿಕ್ಕ ಮಗು ಮತ್ತೊಮ್ಮೆ ಸಿಗಲಾರದು. ಬೆಳಗಿನ ಜಾವ 4.30ರಿಂದ 8.30ರವರೆಗೆ ಪಾಠ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಜ್ಯೋತಿ ಬೀಳಗಿ (8904617362) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.