ADVERTISEMENT

ನಾಯಿಗಳ ಹಾವಳಿಗೆ ಬೆಚ್ಚಿದ ಜನತೆ: ವರ್ಷದಲ್ಲಿ 25 ಸಾವಿರಕ್ಕೂ ಹೆಚ್ಚು ಜನರಿಗೆ ಕಡಿತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:30 IST
Last Updated 23 ಜನವರಿ 2026, 7:30 IST
ಬಾಗಲಕೋಟೆಯಲ್ಲಿ ಕಂಡು ಬಂದ ಬೀದಿ ನಾಯಿಗಳ ಹಿಂಡು
ಬಾಗಲಕೋಟೆಯಲ್ಲಿ ಕಂಡು ಬಂದ ಬೀದಿ ನಾಯಿಗಳ ಹಿಂಡು   

ಬಾಗಲಕೋಟೆ: ನವನಗರದಲ್ಲಿ ಬಾಲಕಿಯೊಬ್ಬಳು ಇತ್ತೀಚೆಗೆ ನಾಯಿ ಕಡಿದು ಮೃತಳಾಗಿದ್ದಾಳೆ. ನಾಯಿಗಳು ಹೆಚ್ಚಿದ್ದು, ಜಿಲ್ಲೆಯಲ್ಲಿ ನಿತ್ಯ ಹತ್ತಾರು ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಮೂರು ವರ್ಷಗಳ ಅಂಕಿ–ಅಂಶಗಳನ್ನು ನೋಡಿದಾಗ ವರ್ಷದಿಂದ ವರ್ಷಕ್ಕೆ ನಾಯಿಗಳ ಕಡಿತದ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 2025ರೊಂದರಲ್ಲಿಯೇ 25,096 ಜನರ ಮೇಲೆ ನಾಯಿಗಳ ದಾಳಿ ನಡೆದಿದೆ. ನಿತ್ಯ ಸರಾಸರಿ 68 ಜನರು ನಾಯಿ ಕಡಿತಕ್ಕೆ ಈಡಾಗುತ್ತಿದ್ದಾರೆ.

ನಾಯಿ ಕಡಿತದಿಂದ ಕಳೆದ ವರ್ಷ ಐವರು ಮೃತರಾಗಿದ್ದಾರೆ. ಈ ವರ್ಷದ ಆರಂಭದಲ್ಲಿಯೇ ಬಾಲಕಿಯೊಬ್ಬರು ಬಲಿಯಾಗಿದ್ದಾರೆ. ನಾಯಿ ಹಾವಳಿ ತಡೆಗಟ್ಟಬೇಕು ಎನ್ನುವ ಸಾರ್ವಜನಿಕರ ಕೂಗು ಕೇಳಿ ಬರುತ್ತಲೇ ಇದೆ. ಆದರೆ, ಸ್ಪಂದನೆ ದೊರೆತಿದ್ದು ಕಡಿಮೆ.

ADVERTISEMENT

ಇಳಕಲ್‌ ನಗರದಲ್ಲಿ ನಾಯಿಯೊಂದು 30ಕ್ಕೂ ಹೆಚ್ಚು ಜನರನ್ನು ಕಡಿದಿತ್ತು. ಬಾಗಲಕೋಟೆಯಲ್ಲಿ ನಾಯಿಯೊಂದು 10 ಜನ ಅಂಧ ಮಕ್ಕಳ ಮೇಲೆ ದಾಳಿ ನಡೆಸಿತ್ತು. ಅಲ್ಲಲ್ಲಿ ನಾಯಿಗಳು ಕಡಿತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ತಿಂಗಳುಗಟ್ಟಲೇ ಚಿಕಿತ್ಸೆ ಪಡೆಯುತ್ತಿರುತ್ತಾರೆ.

ಬೆಳಿಗ್ಗೆ ಹಾಗೂ ಸಂಜೆ ಜನರು ವಾಕಿಂಗ್‌ ಹೋಗಲು ಹೆದರುವಂತಾಗಿದೆ. ಮಕ್ಕಳನ್ನು ಓಣಿಯಲ್ಲಿ ಆಟವಾಡಿಸಲು ಕಳುಹಿಸಲು, ಶಾಲೆಗೆ, ಟ್ಯೂಷನ್‌ಗೆ ಒಬ್ಬರನ್ನೇ ಕಳುಹಿಸಿದ ಪರಿಸ್ಥಿತಿ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿದೆ. ಕೆಲವು ಕಡೆಗಳಲ್ಲಿ ನಾಯಿಗಳು ವಾಹನವನ್ನು ಬೆನ್ನಟ್ಟುವುದರಿಂದ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳೂ ನಡೆದಿವೆ.

ಬೀದಿ ಬದಿ ಇರುವ ಮಾಂಸದ ಅಂಗಡಿಗಳವರು, ಎಗ್‌ ರೈಸ್ ಸೆಂಟರ್‌ಗಳವರು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದೇ, ಹೆಚ್ಚುವರಿ ಹಾಗೂ ತ್ಯಾಜ್ಯದ ತುಂಡುಗಳನ್ನು ಎಸೆಯುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪ.

ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ 3,949, ಬಾದಾಮಿ ತಾಲ್ಲೂಕಿನಲ್ಲಿ 3,894, ಹುನಗುಂದ ತಾಲ್ಲೂಕಿನಲ್ಲಿ 3,353, ಬಾಗಲಕೋಟೆ ತಾಲ್ಲೂಕಿನಲ್ಲಿ 3,439 ಪ್ರಕರಣಗಳು 2025ರಲ್ಲಿ ದಾಖಲಾಗಿವೆ. ಪ್ರತಿ ತಾಲ್ಲೂಕಿನಲ್ಲಿ ನಾಯಿಗಳ ಕಡಿತಕ್ಕೆ ಒಳಗಾದವರ ಸಂಖ್ಯೆ ನಾಲ್ಕು ಸಂಖ್ಯೆಯಲ್ಲಿಯೇ ಇದೆ.

ಈಗಾಗಲೇ ಒಂದು ಸುತ್ತು ನಾಯಿಗಳ ಸಂತಾನಶಕ್ತಿ ಹರಣ ಮಾಡಿಸಲಾಗಿದೆ. ಈಗ ಇನ್ನಷ್ಟು ನಾಯಿಗಳ ಸಂತಾನಶಕ್ತಿ ಹರಣ ಮಾಡಿಸಲಾಗುತ್ತಿದೆ
ಸತೀಶ ಕಜ್ಜಿಡೋಣಿ ಪರಿಸರ ಎಂಜಿನಿಯರ್ ನಗರಸಭೆ ಬಾಗಲಕೋಟೆ
ಬಾಗಲಕೋಟೆಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನರು ತಿರುಗಾಡಲು ಎದುರಾಡುವಂತಾಗಿದೆ. ಜನರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು
ಗಿರೀಶ ಭಾಂಡಗೆ ನಿವಾಸಿ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.