ರಾಂಪುರ: ತಮ್ಮ ಊರಿಗೆ ಬಸ್ಸುಗಳನ್ನು ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಿ ಸಮೀಪದ ಬೇವಿನಮಟ್ಟಿ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶನಿವಾರ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡಿದರು.
ಬೆಳಿಗ್ಗೆ ಗ್ರಾಮದ ಧ್ವಾರಬಾಗಿಲು ಬಳಿ ರಸ್ತೆಗೆ ಮುಳ್ಳುಕಂಟಿ, ಕಟ್ಟಿಗೆ ಹಾಕಿ ಅಲ್ಲಿಯೇ ಕುಳಿತು ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು, ಬೆಳಿಗ್ಗೆ ಶಾಲಾ-ಕಾಲೇಜಿಗೆ ತೆರಳಲು ಬಸ್ಸುಗಳಿಗೆ ಕಾಯುತ್ತಾ ನಿಂತರೂ ಯಾವುದೇ ಬಸ್ಸು ನಿಲ್ಲಿಸುವುದಿಲ್ಲ. ಇದರಿಂದ ನಮಗೆ ತೊಂದರೆಯಾಗಿದೆ’ ಎಂದು ದೂರಿದರು.
ಬಾಗಲಕೋಟೆ ಗ್ರಾಮೀಣ ಠಾಣೆಯ ಪಿಎಸ್ಐ ಗಿರೀಶ ಸ್ಥಳಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳ ಬೇಡಿಕೆ ಆಲಿಸಿದರು. ಸಾರಿಗೆ ಸಂಸ್ಥೆಯ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದರು.
ಸಾರಿಗೆ ಸಂಸ್ಥೆಯ ಪ್ರತಿನಿಧಿ ಸ್ಥಳಕ್ಕೆ ಬಂದು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಗ್ರಾಮದ ಪ್ರಮುಖ ದ್ಯಾಮಣ್ಣ ಗಾಳಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ನಿವಾರಿಸುವಂತೆ ತಿಳಿಸಿದರು.
ರಾಹುಲ್ ಸೂಳಿಕೇರಿ, ಸಿದ್ದು ಶೆಟ್ಟಿ, ಮಹಾದೇವಿ ಗೌಡರ, ಶಿಲ್ಪಾ ಶೆಟ್ಟಿ, ರೇಣುಕಾ ಪಾದನಕಟ್ಟಿ ಮತ್ತಿತರ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.