ಬಾದಾಮಿ: ಬನಶಂಕರಿ ರಸ್ತೆಯಲ್ಲಿ ಹೋಗುವಾಗ ಮಾರ್ಗಮಧ್ಯದಲ್ಲಿ ಸ್ನೇಹಿತ ವೆಂಕಣ್ಣ ಭೇಟಿಯಾದ. ‘ ಯಾಕ್ರಿ ಇಕಾಡೆ ಹೊಂಟ್ರಿ ಎಂದು ಪ್ರಶ್ನಿಸಿದ. ನಾನು ಸುಡುಗಾಡಿಗೆ ಹೊಂಟೇನಿ ‘ ಎಂದು ಉತ್ತರಿಸಿದೆ. ಒಬ್ಬರ ಹೊಂಟಿರಲ್ಲ ಯಾಕ ಎಂದು ಮರಪ್ರಶ್ನೆ ಹಾಕಿದ. ಸುಡುಗಾಡಿಗೆ ಒಬ್ಬರೇ ಹೋಗಬೇಕಲ್ಲ ಜೊತೆಗೆ ಯಾರೂ ಬರುವುದಿಲ್ಲ ಎಂದು ಹೇಳಿದಾಗ ನನ್ನ ಸ್ನೇಹಿತ ನಕ್ಕು ಆಶ್ಚರ್ಯ ವ್ಯಕ್ತಪಡಿಸಿದ.
ಸಡುಗಾಡಿಗೆ ಹೊಂಟಿಲ್ಲ ಸುಳ್ಳ ಹೇಳತೀರಿ ನೀವು ಎಂದಾಗ ಸುಡುಗಾಡಿಗೆ ನೀವು ಬರ್ರಿ ಕರಕೊಂಡು ಹೋಗತೀನಿ ಎಂದೆ. ಅದಕ್ಕೆ ಅವರು ಅಲ್ಲಿ ದೆವ್ವ, ಭೂತ, ಪಿಶಾಚಿ ಇರ್ತಾವು. ನನಗೆ ಭಯ ಬರುತ್ತದೆ ಬರುದಿಲ್ಲ ಎಂದರು. ಇಲ್ಲಾ ಅಲ್ಲೊಂದು ಕಾರ್ಯಕ್ರಮ ಐತಿ ಅದಕ ಹೊಂಟೀನಿ ಎಂದೆ. ಸುಡುಗಾಡದಾಗ ಕಾರ್ಯಕ್ರಮ ಇಟ್ಟಾರ್ಯ ಎಂತಾ ಧೈರ್ಯವಂತರು ಅವರು . ಕಾರ್ಯಕ್ರಮ ಕೇಳಾಕ ಬರುವವರೂ ಧೈರ್ಯವಂತರೇ ಎಂದು ಹೊಗಳಿದರು.
ಕಾರ್ಯಕ್ರಮದ ವೀಕ್ಷಣೆಗೆ ವೃದ್ಧರು, ವೈದ್ಯರು, ಸ್ನೇಹಿತರು, ಚಿಂತಕರು, ಆಸಕ್ತರು ಮತ್ತು ಮಹಿಳೆಯರೂ ಬಂದರು. ಸುಡುಗಾಡು ಪ್ರವೇಶಕ್ಕೆ ಹೊಸ ಬಣ್ಣ ಬಣ್ಣದ ಬಟ್ಟೆಯನ್ನು ಕಟ್ಟಿದ್ದರು. ಝಗಮಗಿಸುತ್ತಿರುವ ವಿದ್ಯುತ್ ದೀಪಗಳು ನಮ್ಮನ್ನು ಸ್ವಾಗತಿಸಿದವು. ಇದು ಸುಡುಗಾಡು ರಸ್ತೆಯೋ ಇಲ್ಲವೇ ಮದುವೆಯ ಮಂಟಪದ ರಸ್ತೆಯೋ ಇಷ್ಟೊಂದು ಅಂದವಾಗಿರುವುದೇ ಎಂದು ದಿಕ್ಕು ತೋಚದಂತಾಯಿತು.
ಸುಡುಗಾಡು ಒಳಗೆ ಪ್ರವೇಶಿಸಿದಂತೆ ಮದುವೆಯ ಮಂಟಪಕ್ಕೆ ಹಸುರಿನ ಹಂದಿರ ಹಾಕಿದಂತೆ ಬೇವಿನ ಮತ್ತು ಅರಳೆ ಮರಗಳ ಎಲೆಗಳು ತಲೆದೂಗುತ್ತ ನಮ್ಮನ್ನು ತೆಂಕಣ ಗಾಳಿಯಿಂದ ಸೋಂಕಿಸಿದವು. ಗಿಡಮರಗಳಿಗೆ ವಿದ್ಯುತ್ ದೀಪದ ಬೆಳಕಿನ ಸೌಂದರ್ಯವನ್ನು ವೀಕ್ಷಿಸಿ ನಾವು ಮಂತ್ರಮುಗ್ಧರಾದೆವು. ಸ್ಮಶಾನದ ಗಿಡಕ್ಕೆ ದೀಪಗಳು ಬೆಳಗಿದಂತೆ ಆಕಾಶದಲ್ಲಿ ತಾರೆಗಳು ಫಳಫಳನೇ ಮಿನುಗಿದವು. ಇದೇನು ಸ್ಮಶಾನವೋ ಇಲ್ಲವೇ ಆಲಮಟ್ಟಿ ಗಾರ್ಡನ್ನಿನಂತೆ ಶೋಭಿಸುವ ಉದ್ಯಾನ ವನವೋ ಎಂದು ಅಚ್ಚರಿಯಾಯಿತು.
ಸುಡುಗಾಡಿನಲ್ಲಿ ಪುಸ್ತಕದ ಅಂಗಡಿಗಳಲ್ಲಿ ಪುಸ್ತಕ ಮಾರಾಟ ಜೋರಾಗಿತ್ತು. ಆಸಕ್ತರು ಪುಸ್ತಕಗಳನ್ನು ಖರೀದಿ ನಡೆಸಿದ್ದರು. ಶರಣರ, ಸಿದ್ದೇಶ್ವರ ಸ್ವಾಮೀಜಿ, ಸುತ್ತೂರ ಮಠದ ಸ್ವಾಮೀಜಿ ಮತ್ತು ನಿಜಗುಣಪ್ರಭು ಸ್ವಾಮೀಜೀಗಳು ರಚಿಸಿದ ವಚನ ಸಾಹಿತ್ಯ, ಧಾರ್ಮಿಕ ಗ್ರಂಥಗಳು ಚಿಂತನಾ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆದಿತ್ತು. ಸ್ಮಶಾನದಲ್ಲಿ ಪುಸ್ತಕ ಮಾರಾಟವೇ ಎಂದು ಪ್ರಶ್ನೆ ಮೂಡಿ ಮಾಯವಾಯಿತು.
ಸರಿಯಾಗಿ ಸಂಜೆ 7 ಗಂಟೆಗೆ ಕಾರ್ಯಕ್ರಮ ಆರಂಭದಲ್ಲಿ ಕುರ್ಚಿಗಳೆಲ್ಲ ಖಾಲಿ ಇದ್ದವು. ಸುಡುಗಾಡನಲ್ಲಿ ನಡೆಯುವ ಸಮಾರಂಭಕ್ಕೆ ಯಾರು ಬರುವರು ಜನರು ಹೆದರುವರು ಎಂದು ಬಂದು ಕುಳಿತವರು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿದ್ದರು. ನಂತರ ಸಮಾರಂಭಕ್ಕೆ ನಿಜಗುಣಪ್ರಭು ಸ್ವಾಮೀಜಿ ಬಂದ ಮೇಲೆ ಇಡೀ ಸ್ಮಶಾಸನದ ಆವರಣವೆಲ್ಲ ಭರ್ತಿಯಾಗಿ ಆಸಕ್ತರು ಗಂಟೆ ಕಾಲ ನಿಂತುಗೊಂಡೇ ‘ ಮರಣವೇ ಮಹಾನವಮಿ ‘ ಉಪನ್ಯಾಸ ಆಲಿಸಿದರು.
ಶಾಶ್ವತವಾಗಿ ಇಲ್ಲಿರಲು ಯಾರೂ ಬಂದಿಲ್ಲ. ಜಗತ್ತಿನಲ್ಲಿರುವ 84 ಕೋಟ ಜೀವರಾಶಿಗಳಿಗೂ ಹುಟ್ಟು -ಸಾವು ಅನಿವಾರ್ಯ. ಸಾವು ಯಾರನ್ನು ಬಿಟ್ಟಿಲ್ಲ. ನಾವೆಲ್ಲ ಭೂಮಿಯಲ್ಲಿ ಹುಟ್ಟಿ ಬಂದದ್ದು ಸಾಯಲಿಕ್ಕೆ. ಆದರೆ ಯಾವಾಗ ಸಾವು ಬರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಮರಣ ಬಂದರೆ ನಾವು ಸುಡುಗಾಡಿಗೆ ಬರಬೇಕು. ‘ಅಲ್ಲಿರುವುದು ಸುಮ್ಮನೆ ಇಲ್ಲಿರುವುದು ನಮ್ಮನೆ ‘ ಇದು ನಮ್ಮ ಶಾಶ್ವತವಾದ ಮನೆ ಎಂದು ಸ್ವಾಮೀಜಿ ಹೇಳಿದರು.
ಜಗತ್ತಿನಲ್ಲಿ ಅನೇಕ ರಾಜ ಮಹಾರಾಜರು ಗತವೈಭವದಿಂದ ಮೆರೆದು ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದಾರೆ.ಜಗತ್ತಿನಲ್ಲಿ ಅನೇಕ ಮಹಾತ್ಮರು, ಸಾಧು ಸತ್ಪುರುಷರು, ಸಂತರು, ಶರಣರು, ದಾಸರು, ದಾರ್ಶನಿಕರು ಜನಿಸಿ ಮನುಕುಲದ ಉದ್ಧಾರಕ್ಕೆ ಉತ್ತಮ ಸಂದೇಶಗಳನ್ನು ನೀಡಿ ಹೋಗಿದ್ದಾರೆ. ಯಾರೂ ಜೀವಂತವಾಗಿ ಉಳಿದಿಲ್ಲ. ಸಿರಿವಂತರು, ಬಡವರು. ಮೇಲ್ವರ್ಗ, ಕೆಳವರ್ಗ ಎಲ್ಲರಿಗೂ ಸಾವು ಸಮಾನವಾಗಿದೆ ನೋಡಿದೆ. ಎಲ್ಲರೂ ಒಂದು ದಿನ ಇಲ್ಲಿಗೆ ಬರಲೇಬೇಕು ಅಲ್ಲವೇ ? ಎಂದು ಸ್ವಾಮೀಜಿ ಪ್ರಶ್ನಿಸಿದರು.
ನಮ್ಮಲ್ಲಿ ಕೆಲವೆಡೆ ಸ್ಮಶಾನಕ್ಕೆ ಸ್ಥಳ ಇಲ್ಲದಂತಾಗಿದೆ. ಆದರೆ ವಿದೇಶದಲ್ಲಿ ಸ್ಮಶಾನಕ್ಕೆ ಕೊಟ್ಟ ಗೌರವ ನಮ್ಮಲ್ಲಿ ಇಲ್ಲ. ಇರುವಷ್ಡು ಕಾಲ ಸರಿಯಾಗಿ ನೆಮ್ಮದಿಯಿಂದ ಪ್ರೀತಿಯಿಂದ ಬದುಕಿ ಬಾಳಬೇಕು. ಸಮಾಜಕ್ಕೆ, ದೇಶಕ್ಕೆ ಮಾನವರು ಉತ್ತಮ ಸಂದೇಶವನ್ನು ಕೊಡಬೇಕಿದೆ ಎಂದು ಹೇಳಿದರು.
ನಿನ್ನ ಜೊತೆ ಸುಡುಗಾಡಕ್ಕೆ ಬಂದು ಉತ್ತಮ ಉಪನ್ಯಾಸ ಕೇಳಿದೆ. ಸುಡುಗಾಡು ಎಂಬ ಭೀತಿ ದೂರವಾಯಿತು ಎಂದು ಸ್ನೇಹಿತ ಖುಷಿಯಾದರು. ಹೊರಗೆ ಬರುವಾಗ ರಸ್ತೆಯಿಂದ ಧ್ವನಿಯೊಂದು ತೇಲಿ ಬಂದಿತು. ಯಾರೋ ದೊಡ್ಡವರು ಸತ್ತಿರಬೇಕು ಮಣ್ಣ ಕೊಟ್ಟು ಬಹಳ ಮಂದಿ ಸುಡುಗಾಡದಾಗಿಂದ ಬರಾಕಹತ್ಯಾರ ಎಂದು !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.