ADVERTISEMENT

ಮುಧೋಳ | ಶುಗರ್ ಟೆಕ್ನಾಲಜಿ ಕಾಲೇಜು ಸ್ಥಾಪನೆಯ ಗುರಿ: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 5:05 IST
Last Updated 26 ಜನವರಿ 2026, 5:05 IST
ಮುಧೋಳದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಮ್ಮ 76 ಜನ್ಮ ದಿನ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿದರು
ಮುಧೋಳದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಮ್ಮ 76 ಜನ್ಮ ದಿನ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿದರು   

ಮುಧೋಳ: ‘ಮುಧೋಳ ಮತಕ್ಷೇತ್ರದಲ್ಲಿ ಶುಗರ್ ಟೆಕ್ನಾಲಜಿ ಕಾಲೇಜು ಹಾಗೂ ಸರ್ಕಾರಿ ಮಹಿಳಾ ಪದವಿ ಕಾಲೇಜು ಸ್ಥಾಪನೆ ಮಾಡುವ ಕೆಲಸ ಬಾಕಿ ಇದೆ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ತಿಳಿಸಿದರು.

ಭಾನುವಾರ ಇಂಗಳಗಿ ರಸ್ತೆ ಹತ್ತಿರ ಇರುವ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಆಯೋಜಿಸಿದ್ದ ’ಗೋವಿಂದ ಕಾರಜೋಳರ 76ನೇ ಜನ್ಮದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಧೋಳಕ್ಕೆ ಮಾತ್ರವಲ್ಲದೇ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲೂ ಮಾಡುತ್ತ ಬಂದಿದ್ದೇನೆ. ಸಣ್ಣ ನೀರಾವರಿ ಸಚಿವನಿದ್ದಾಗ ವೇದಾವತಿ ನದಿಗೆ ಸಣ್ಣ ಬ್ಯಾರೇಜ್ ನಿರ್ಮಾಣ ಮಾಡಿಸಿದ್ದೆ ಅದರಿಂದಲೇ ನನಗೆ 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಬಲ ಲಭಿಸಿತು’ ಎಂದು ಹೇಳಿದರು.

ADVERTISEMENT

‘ಜನರು ತಮ್ಮ ಅನ್ನ ತಿಂದು ನೆಮ್ಮದಿಯಿಂದ ಬದುಕುತ್ತಿದ್ದಾಗ ಗೂಂಡಾಗಿರಿ ಮಾಡಬಾರದು. ಜನಪ್ರತಿನಿಧಿಯಾಗಿ ಅಭಿವೃದ್ಧಿಮಾಡಬೇಕು. ಜನರನ್ನು ಶಿಕ್ಷಣವಂತರನ್ನಾಗಿ ಮಾಡಲು ಮುಂದಾಗಬೇಕು. ನಾನು 30 ವರ್ಷಗಳಿಂದ ಘಟಪ್ರಭಾ ನದಿಯ ಉಸುಕು ತೆಗೆದುಕೊಳ್ಳಲು ಬಿಡಲಿಲ್ಲ. ಇದರಿಂದ ನದಿ ಉಳಿದಿತ್ತು. ಈಗ ಉಸುಕು ಲೂಟಿ ನಡೆದಿದೆ. ತಾಲ್ಲೂಕಿನಲ್ಲಿ ಮದ್ಯದ ಅಂಗಡಿಗೆ ನಾನು ಅನುಮತಿ ಕೊಟ್ಟಿಲ್ಲ. ಏಕೆಂದರೆ ಅಲ್ಲಿನ ಜನರ ಸಂಸ್ಕೃತಿ ನಾಶವಾಗುತ್ತದೆ. ಇಂದು ಏನು ನಡೆಯುತ್ತಿದೆ ಎಂಬುದು ನಿಮ್ಮ ಮುಂದೆಯೇ ಇದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಶ್ರೀಶೈಲಗೌಡ ಪಾಟೀಲ ಮಾತನಾಡಿ, ‘ಅನ್ನ, ಆರೋಗ್ಯ, ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕಾರಜೋಳ ಹೆಸರು ವಾಸಿಯಾಗಿದ್ದಾರೆ. ಶಿಕ್ಷಣದಿಂದಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದು ರಾಜ್ಯದಲ್ಲೆ ಅತಿ ಹೆಚ್ಚು ವಸತಿ ಶಾಲೆ, ವಸತಿ ನಿಲಯಗಳನ್ನು ನಿರ್ಮಾಣ ಮಾಡುವ ಮೂಲಕ ತಾಲ್ಲೂಕಿನ ಮತದಾರರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ’ ಎಂದು ಹೇಳಿದರು.

‘ಕಾರಜೋಳ ಅವರು ಜಿಲ್ಲಾ ಕೇಂದ್ರದಲ್ಲಿ ಇರುವಂತಹ ಮಿನಿ ವಿಧಾನ ಸೌಧ ಕಟ್ಟಿಸಿದರು. ಅದಕ್ಕೆ ಒಬ್ಬ ತಹಶೀಲ್ದಾರ್ ತರಲು ಇಲ್ಲಿನ ಜನಪ್ರತಿನಿಧಿಗೆ ಸಾಧ್ಯವಾಗಲಿಲ್ಲ. ಬಿಜೆಪಿ ಹೋರಾಟ ಮಾಡಿದಾಗ ತಹಶೀಲ್ದಾರರನ್ನು ನೇಮಕ ಮಾಡಿದ್ದಾರೆ. ಕಾರಜೋಳರನ್ನು ನಾವು ಕಳೆದುಕೊಂಡೆವು. ಆದರೆ ಚಿತ್ರದುರ್ಗ ಜನರು ಪಡೆದುಕೊಂಡು ಪುಣ್ಯವಂತರಾದರು’ ಎಂದು ಅಭಿಪ್ರಾಯಪಟ್ಟರು.

ಮುಖಂಡರಾದ ಧರೆಪ್ಪಣ್ಣ ಸಾಂಗಲೀಕರ, ನಾಗಪ್ಪ ಅಂಬಿ ಮಾತನಾಡಿ, ‘ಕಾರಜೋಳರ ರಾಜಕೀಯ ಜೀವನ ಕಳಂಕರಹಿತವಾಗಿದೆ. ಅವರು ಜನಮಾನಸದಲ್ಲಿ ಉಳಿದಿರುವ ನಾಯಕ’ ಎಂದರು.

ಬೆಳಿಗ್ಗೆ ಗಣೇಶ ಮಂದಿರದಲ್ಲಿ, ಸೈಯ್ಯದ್ ಸಾಬ ದರ್ಗಾದಲ್ಲಿ ಪೂಜೆ ಹಾಗೂ ಮಾಲಾಪುರ ಗ್ರಾಮದ ಗೋಶಾಲೆಯಲ್ಲಿ ಪೂಜೆಯಲ್ಲಿ ಕಾರಜೋಳ ಭಾಗವಹಿಸಿದ್ದರು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಅಂಗವಿಕಲ ಮಕ್ಕಳಿಗೆ ಹಣ್ಣು ವಿತರಣೆ ನಡೆಯಿತು. ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವಯೋರ್ಚಾದಿಂದ ರಕ್ತದಾನ ಶಿಬಿರ ನಡೆಯಿತು.

ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷರಾದ ಸಂಗಣ್ಣ ಕಾತರಕಿ, ಬಸವರಾಜ ಮಳಲಿ, ನಾರಾಯಣ (ರಾಜು) ಯಡಹಳ್ಳಿ, ಶ್ರೀಕಾಂತ ಗುಜ್ಜನ್ನವರ, ಕರಬಸಯ್ಯ ಹಿರೇಮಠ‌, ಸಂತೋಷಗೌಡ ಪಾಟೀಲ, ಕೆ.ಆರ್..ಮಾಚಪ್ಪನವರ, ಅರುಣ ಕಾರಜೋಳ, ಉಮೇಶ ಕಾರಜೋಳ, ಶಾಂತಾದೇವಿ ಕಾರಜೋಳ, ಡಾ.ಅಶ್ವಿನಿ ಕಾರಜೋಳ, ಶ್ರೀದೇವಿ ಕಾರಜೋಳ, ಡಾ.ಪುಷ್ಠಾ ಕಾರಜೋಳ. ಲೋಕಣ್ಣ ಕತ್ತಿ, ಸುನೀಲ ಕಂಬೋಗಿ, ಶ್ರೀಶೈಲ ಚಿನ್ನನವರ ಹಾಜರಿದ್ದರು.

ಮುಧೋಳದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರ 76 ಜನ್ಮ ದಿನ ಆಚರಿಸಲಾಯಿತು

ಕಾರ್ಯಕರ್ತರ ಶ್ರಮದಿಂದಲೇ ಸಾಧನೆ ಸಾಧ್ಯ: ‘ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ತಾಲ್ಲೂಕಿನ 10 ರಿಂದ 12 ಗ್ರಾಮಗಳಲ್ಲಿ ಮಾತ್ರ ನೀರಾವರಿ ಯೋಜನೆ ಇತ್ತು. ತಾಲ್ಲೂಕಿನಲ್ಲಿ ಎಲ್ಲ ಕಡೆ ನೀರಾವರಿ ಮಾಡಿಸಿದ್ದೇನೆ. ಹಲಗಲಿ ಗ್ರಾಮದಲ್ಲಿ ನೀರು ಇಲ್ಲದ ಕಾರಣ ಅಲ್ಲಿನ ಜನರಿಗೆ ಮದುವೆಗೆ ಹೆಣ್ಣು ಕೊಡುತ್ತಿರಲಿಲ್ಲ. ಇಂದು 24 ಗಂಟೆ ನೀರು ಬರುತ್ತದೆ. ನಿಮ್ಮ ಋಣ ಇನ್ನೂ ಪೂರ್ಣವಾಗಿ ತೀರಿಸಲು ಆಗಿಲ್ಲ. ನಾನು ಬೆಳೆದಿದ್ದು ಮುಧೋಳದಿಂದ. ಇಲ್ಲಿನ ಕಾರ್ಯಕರ್ತರು ನೌಕರಿ ಮಾಡುವ ಹಾಗೆ ಕೆಲಸ ಮಾಡಿದ್ದಾರೆ. ನಾನು ಈ ಮಟ್ಟಕ್ಕೆ ಬೆಳೆಯಲು ಸಾವಿರಾರು ಕಾರ್ಯಕರ್ತರು ಕಾರಣರಾಗಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.