
ಜಮಖಂಡಿ: ಹಳೆಯ ಕಬ್ಬಿನ ಬಾಕಿ ಬಿಲ್ ಪಾವತಿಸಬೇಕು. ಇಳುವರಿ ಆಧರಿಸಿ ಈ ವರ್ಷ ರಾಜ್ಯ ಸರ್ಕಾರ ನಿಗದಿಪಡಿಸಿರುವ ಬೆಲೆಗೆ ನಮ್ಮ ಒಪ್ಪಿಗೆಯಿಲ್ಲ. ಪ್ರತಿ ಟನ್‌ಗೆ ₹3,500 ನೀಡಬೇಕು ಹಾಗೂ 2024-25ನೇ ಸಾಲಿನ ಎರಡನೇ ಕಂತಿನ ಹಣ ಘೋಷಿಸಬೇಕು ಎಂದು ಆಗ್ರಹಿಸಿ ರೈತರು ಬುಧವಾರ ತಾಲ್ಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಜಮಖಂಡಿ ಮುಧೋಳ ರಾಜ್ಯ ಹೆದ್ದಾರಿ ಮೇಲೆ ಮುಳ್ಳಿನ ಕಂಟಿಗಳನ್ನು ಹಾಕಿ ವಾಹನ ಸಂಚಾರ ತಡೆದು ಪ್ರತಿಭಟನೆ ಮಾಡಿದರು.
ಮುಖಂಡ ಬಾಬು ಹಸರಡ್ಡಿ ಮಾತನಾಡಿ ರಿಕವರಿಯಲ್ಲಿ ಕಾರ್ಖಾನೆಗಳು ಮೋಸ ಮಾಡುತ್ತವೆ. ತೂಕದಲ್ಲಿ ಮೋಸ ಮಾಡುತ್ತಾರೆ. ಆದ್ದರಿಂದ ಕಬ್ಬಿನ ಇಳುವರಿ ಆಧಾರಿತ ದರ ಬೇಡ ಹಾಗೂ 2024-25ನೇ ಸಾಲಿನ ಹೆಚ್ಚುವರಿಯಾಗಿ ₹500 ಹಣ ಕೊಡಲು ಆಗ್ರಹಿಸಿದರು.
ಮುಖಂಡ ಕಲ್ಲಪ್ಪ ಬಿರಾದಾರ ಮಾತನಾಡಿಸಾವಿರಾರು ಕೋಟಿ ವಹಿವಾಟವಾಗುವ ಕಬ್ಬಿನ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು, ಸಕ್ಕರೆ ಕಾರ್ಖಾನೆಗೆ ಅಬಕಾರಿ ಇಲಾಖೆ ಅಧಿಕಾರಿಗಳನ್ನು ನೇಮಕ ಮಾಡಿದಂತೆ ತೂಕ ಚೆಕ್ ಮಾಡಲು ಹಾಗೂ ಇಳುವರಿ ತೆಗೆಯಲು ಸರ್ಕಾರ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕಿನ ಹುನ್ನೂರು ಗ್ರಾಮದಲ್ಲಿ ಹಾಗೂ ಹುಲ್ಯಾಳ ಗ್ರಾಮದಲ್ಲಿ ರೈತರು ಕೆಲ ಹೊತ್ತು ರಸ್ತೆ ತಡೆ ಮಾಡಿ ಕಬ್ಬಿನ ಬಿಲ್ ಗಾಗಿ ಒತ್ತಾಯಿಸಿದರು
ರೈತ ಮುಖಂಡರಾದ ರಾಜು ಬುರ್ಜಿ, ಹಣಮಂತ ಮಗದುಮ, ಬಸವರಾಜ ನ್ಯಾಮಗೌಡ,
ರಾಜು ಕುಲಕಟ್ಟಿ, ಭೀಮಶಿ ಪಾಟೀಲ, ಗುರಪಾದಪ್ಪ ಮೇಲಿನಮನಿ, ಕರೆಪ್ಪ ಭೂಮಾರ ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.