ಬಾಗಲಕೋಟೆ: ಕೇಂದ್ರ ಸರ್ಕಾರವು ನ್ಯಾಯಸಮ್ಮತ ಹಾಗೂ ಪ್ರೋತ್ಸಾಹದಾಯಕ ದರ (ಎಫ್‌ಆರ್‌ಪಿ) ಹೆಚ್ಚಳದಲ್ಲಿ ಅನ್ಯಾಯ ಮಾಡಲಾಗಿದೆ ಎಂದು ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಪ್ರತಿ ಕ್ವಿಂಟಲ್‌ಗೆ ಪಾವತಿಸಬೇಕಿರುವ ಮೊತ್ತವನ್ನು ₹15 ಹೆಚ್ಚಿಸಿದೆ. ಈ ವರ್ಷದ ಅಕ್ಟೋಬರ್‌ನಿಂದ ಆರಂಭವಾಗುವ 2025–26ನೇ ಹಂಗಾಮಿನಲ್ಲಿ ಕಾರ್ಖಾನೆಗಳು ಕ್ವಿಂಟಲ್‌ಗೆ ₹355 ಪಾವತಿಸಬೇಕು ಎಂದು ತಿಳಿಸಿದೆ.
ಕಬ್ಬು ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ನ್ಯಾಯಸಮ್ಮತ ಹಾಗೂ ಪ್ರೋತ್ಸಾಹದಾಯಕ ದರವನ್ನು (ಎಫ್‌ಆರ್‌ಪಿ) ಶೇ 4.41 ಹೆಚ್ಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
2024-25ನೇ ಹಂಗಾಮಿನಲ್ಲಿ ಕಬ್ಬಿನ ಎಫ್‌ಆರ್‌ಪಿಯನ್ನು ಕ್ವಿಂಟಲ್‌ಗೆ ₹340 ಕ್ಕೆ ನಿಗದಿಪಡಿಸಲಾಗಿತ್ತು. ಈಗ ₹15 ರೂ ಹೆಚ್ಚಿಸಲಾಗಿದೆ.
ಒಂದು ಕೆಜಿಗೆ ಕೇವಲ 15 ಪೈಸೆಯಷ್ಟು ಮಾತ್ರ ಹೆಚ್ಚಳ ಮಾಡುವ ಮೂಲಕ ಕಬ್ಬು ಬೆಳೆಗಾರರಿಗೆ ನಾಚಿಕೆಯಾಗುವಂತೆ ಮಾಡಲಾಗಿದೆ ಎಂದು ಮುಖಂಡ ಸುಭಾಷ ಶಿಬರೂರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟವನ್ನು ಕೇಂದ್ರವು ಗಮನಕ್ಕೆ ತೆಗೆದುಕೊಂಡಿಲ್ಲ. ಕಬ್ಬು ಬೆಳೆಯುವ ಖರ್ಚನ್ನು ಹೊರತುಪಡಿಸಿ ಲಾಭಾಂಶ ಇಟ್ಟುಕೊಂಡು ಬೆಲೆ ನಿಗದಿ ಮಾಡಬೇಕುಂಬುದಕ್ಕೆ ಕಾನೂನಿದ್ದರೂ ಅದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ದೂರಿದ್ದಾರೆ.
ಮುಖ್ಯಮಂತ್ರಿ, ಸಕ್ಕರೆ ಸಚಿವ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರನ್ನು ಸೇರಿದಂತೆ ಭೇಟಿಯಾಗಿ ಮನವಿ ಮಾಡಲಾಗಿತ್ತು. 2024–25ನೇ ಸಾಲಿನಲ್ಲಿ ನಿಗದಿ ಮಾಡಿದ್ದ ಬೆಲೆಯಲ್ಲಿಯೇ ಅವೈಜ್ಞಾನಿಕವಾಗಿದೆ ಎಂದು ತಿಳಿಸಿದ್ದೆವು.
ಕೇಂದ್ರವೂ ಈಗ ಕಡಿಮೆ ಬೆಲೆ ನಿಗದಿ ಮಾಡಿರುವುದರಿಂದ ರೈತರಿಗೆ ಖರ್ಚು ಕೂಡ ವಾಪಸ್ ಬರುವುದಿಲ್ಲ. 9.5 ಸಕ್ಕರೆ ಇಳುವರಿಗೆ ಪ್ರತಿ ಟನ್‌ಗೆ ₹4,500 ನೀಡಬೇಕು. ಇಲ್ಲದಿದ್ದರೆ ಹೊಸ ಬೆಲೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.