ಮಹಾಲಿಂಗಪುರ: ಸಮೀಪದ ಸಮೀರವಾಡಿಯ ಕಬ್ಬು ಬೆಳೆಗಾರರ ಸಂಘದ ಸಭಾಭವನದಲ್ಲಿ ಸೋಮವಾರ ನಡೆದ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಆಗುತ್ತಿರುವ ಮೋಸ ಮತ್ತು ಬಾಕಿ ಹಣ ಪಾವತಿ ಸಮಸ್ಯೆಗಳ ಕುರಿತು ರೈತರು ಕಳವಳ ವ್ಯಕ್ತಪಡಿಸಿದರು.
‘ಕಬ್ಬಿಗೆ ನ್ಯಾಯಯುತ ಬೆಲೆಯನ್ನು ನಿಗದಿಪಡಿಸಬೇಕು. ರೈತರು ಕಬ್ಬನ್ನು ಕಾರ್ಖಾನೆಗೆ ಸಾಗಿಸಿದ ಕೂಡಲೇ ಹಣ ಜಮಾ ಮಾಡಬೇಕು. ಕಬ್ಬು ಪೂರೈಕೆ ಮಾಡುವ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ತೂಕದಲ್ಲಿ ಆಗುತ್ತಿರುವ ಮೋಸ ನಿಂತಿದೆ. ಆದರೆ ಕಬ್ಬಿನ ರಿಕವರಿಯಲ್ಲಿ ಮೋಸ ಆಗುತ್ತಿದ್ದು, ಇದನ್ನು ತಡೆಯಬೇಕು’ ಎಂದು ರೈತರು ಆಗ್ರಹಿಸಿದರು.
‘ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಮಾತ್ರ ಭೂಮಿ ಲಾಭ ನೀಡಬೇಕು. ಕಳೆದ ಸಾಲಿನಲ್ಲಿ ಕಬ್ಬು ಕಟಾವು ಮಾಡಿದ ಕಾರ್ಮಿಕರಿಗೆ ಬಾಕಿ ಹಣ ಪಾವತಿಸಬೇಕು’ ಎಂದು ರೈತರು ಒತ್ತಾಯಿಸಿದರು.
‘ಮೋಸ ಮಾಡುವ ಕಾರ್ಖಾನೆಗಳಿಗೆ ಕಬ್ಬು ಕಳುಹಿಸದಿರಲು ರೈತರು ನಿರ್ಧರಿಸಬೇಕು. ರೈತರು ಒಗ್ಗಟ್ಟಾಗಬೇಕು. ಸಕ್ಕರೆ ಕಾರ್ಖಾನೆ ಮಾಲೀಕರು ಅಭಿವೃದ್ಧಿ ಹೊಂದುತ್ತಿದ್ದಾರೆ. ಆದರೆ, ರೈತರು ಇದ್ದಲ್ಲೇ ಇದ್ದಾರೆ. ಕಬ್ಬಿಗೆ ಪರ್ಯಾಯ ಬೆಳೆ ಬೆಳೆಯಲು ಚಿಂತನೆ ಹರಿಸಬೇಕು’ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ರಾಮಕೃಷ್ಣ ಬುದ್ನಿ ಮಾತನಾಡಿ, ‘ಕಬ್ಬು ಅಭಿವೃದ್ಧಿಯಲ್ಲಿ ಸಾಧನೆ ಮಾಡಿದ ರೈತರನ್ನು ಹಾಗೂ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ಅವರ ಮಕ್ಕಳನ್ನು ಮುಂದಿನ ವಾರ್ಷಿಕ ಸಭೆಯಲ್ಲಿ ಸನ್ಮಾನಿಸಬೇಕು’ ಎಂದು ಸಲಹೆ ನೀಡಿದರು.
ರೈತರಾದ ಶಿವಾಜಿ ದಡ್ಡಿಮನಿ, ಶಿವಾನಂದ ಖಾನಗೌಡ, ಪಿ.ಜಿ.ಬಂಗಿ, ರಾಮನಗೌಡ ಜಿ.ಪಾಟೀಲ, ಸುರೇಶ ಹಾದಿಮನಿ ಮಾತನಾಡಿದರು. ಸಂಘದ ಅಧ್ಯಕ್ಷ ರಾಮನಗೌಡ ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಂಗನಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.