ADVERTISEMENT

ಕಬ್ಬು ಬೆಳೆ ದರ ನಿಗದಿಗೆ ಆಗ್ರಹ: ರೈತರ ಹೋರಾಟಕ್ಕೆ ನಿವೃತ್ತ ಸೈನಿಕರ ಬೆಂಬಲ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:31 IST
Last Updated 8 ನವೆಂಬರ್ 2025, 4:31 IST
ತೇರದಾಳದಲ್ಲಿ ಕಬ್ಬು ಬೆಲೆ ಹೆಚ್ಚಿಸಲು ಆಗ್ರಹಿಸಿ ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ತಡೆದು ರೈತ ಸಂಘ ಹಾಗೂ ವಿವಿಧ ಸಂಘಟನೆಯವರು ಪ್ರತಿಭಟಿಸಿದರು
ತೇರದಾಳದಲ್ಲಿ ಕಬ್ಬು ಬೆಲೆ ಹೆಚ್ಚಿಸಲು ಆಗ್ರಹಿಸಿ ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ತಡೆದು ರೈತ ಸಂಘ ಹಾಗೂ ವಿವಿಧ ಸಂಘಟನೆಯವರು ಪ್ರತಿಭಟಿಸಿದರು   

ತೇರದಾಳ: ಕಬ್ಬಿಗೆ ದರ ಹೆಚ್ಚಿಸಬೇಕೆಂದು ಆಗ್ರಹಿಸಿ ರಾಜ್ಯದ ವಿವಿದೆಡೆ ಪ್ರತಿಭಟನೆ, ರಸ್ತೆ ಬಂದ್ ನಡೆಯುತ್ತಿರುವುದಕ್ಕೆ ಬೆಂಬಲವಾಗಿ ಇಲ್ಲಿನ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ಬಂದ್ ಮಾಡಿ ಶುಕ್ರವಾರ ಕೆಲಕಾಲ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಗೆ ನಿವೃತ್ತ ಸೈನಿಕರು, ಕನ್ನಡಪರ ಸಂಘಟನೆಗಳು, ಅಟೋ ಚಾಲಕರು ಸಾಥ್ ನೀಡಿದ್ದರು. ಪ್ರತಿಭಟನಾಕಾರರು ಕ್ಷೇತ್ರಾಧಿಪತಿ ಅಲ್ಲಪ್ರಭು ದೇವರ ದೇವಸ್ಥಾನದಲ್ಲಿ ಜಮಾಯಿಸಿ, ಅಲ್ಲಿಂದ ಸಿದ್ದೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಜವಳಿ ಬಜಾರ, ಕನ್ನಡ ಶಾಲೆ, ತಹಶೀಲ್ದಾರ್ ಕಚೇರಿ ಮಾರ್ಗವಾಗಿ ವಾದ್ಯ ಮೇಳಗಳೊಂದಿಗೆ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ದ ಘೋಷಣೆಗಳನ್ನು ಕೂಗುತ್ತ ಪಾದಯಾತ್ರೆ ಮೂಲಕ ಸಂಚರಿಸಿ ಬಸ್ ನಿಲ್ದಾಣ ತಲುಪಿದರು. ಅಲ್ಲಿನ ಹೆದ್ದಾರಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ, ರಾಜ್ಯ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ರೈತ ವಿರೋಧಿ ನೀತಿಯನ್ನು ಖಂಡಿಸಿ ಸಾಮೂಹಿಕವಾಗಿ ಬೊಬ್ಬೆ ಹೊಡೆಯುವ ಮೂಲಕ ಧಿಕ್ಕಾರ ಕೂಗಿದರು.

ಈ ವೇಳೆ ಮಾತನಾಡಿದ ರೈತ ಹೋರಾಟಗಾರರಾದ ಬಂದು ಪಕಾಲಿ ಹಾಗೂ ಶ್ರೀಕಾಂತ ಗೂಳನ್ನವರ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಪರವಾಗಿ ನಿಲ್ಲುತ್ತಿಲ್ಲವೆಂಬುದು ಬೇಸರದ ಸಂಗತಿ. ರೈತರು ಕೇಳುತ್ತಿರುವ ಬೆಲೆ ಆತನ ಬೆವರಿನದಾಗಿದೆ ಹೊರತು ಬೇರೆನಲ್ಲ ಎಂದರು.

ADVERTISEMENT

ಮುಖಂಡರಾದ ಪ್ರವೀಣ ನಾಡಗೌಡ, ಅಪ್ಪು ಮಂಗಸೂಳಿ, ಅಲ್ಲಪ್ಪ ಮದಲಮಟ್ಟಿ, ಮಹಾವೀರ ಕೊಕಟನೂರ, ಮಗೆಪ್ಪ ತಾರದಾಳ, ಬಸವರಾಜ ಬಾಳಿಕಾಯಿ, ರಮೇಶ ಧರೆನ್ನವರ, ರವಿ ಸಲಬನ್ನವರ, ಸದಾಶಿವ ಹೊಸಮನಿ, ಭುಜಬಲಿ ಕೆಂಗಾಲಿ, ಯಲ್ಲಪ್ಪ ಮುಶಿ, ರಮೇಶ ಪಟ್ಟಣಶೆಟ್ಟಿ, ರಾಮಣ್ಣ ಹಿಡಕಲ್ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.