ADVERTISEMENT

ಹೆಚ್ಚಿದ ಬಿಸಿಲ ತಾಪ: ಜನ ತತ್ತರ

ಜನರು ತಂಪು ಪಾನೀಯಕ್ಕೆ ಮೊರೆ; ಪ್ರಾಣಿಗಳು ನೀರಿಗೆ ಮೊರೆ

ಎಸ್.ಎಂ.ಹಿರೇಮಠ
Published 28 ಮಾರ್ಚ್ 2023, 19:30 IST
Last Updated 28 ಮಾರ್ಚ್ 2023, 19:30 IST
ಬಾದಾಮಿಯಲ್ಲಿ ಬಿಸಿಲಿನ ತಾಪದಿಂದ ಜನರು ತಂಪು ಪಾನೀಯದ ಮೊರೆ ಹೋದರು
ಬಾದಾಮಿಯಲ್ಲಿ ಬಿಸಿಲಿನ ತಾಪದಿಂದ ಜನರು ತಂಪು ಪಾನೀಯದ ಮೊರೆ ಹೋದರು   

ಬಾದಾಮಿ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಜನರು ಮತ್ತು ಪ್ರಾಣಿಗಳು 11 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ತತ್ತರಿಸುವಂತಾಗಿದೆ.

ಪಟ್ಟಣದ ನಿವಾಸಿಗಳಿಗೆ ಪೂರ್ವದಿಕ್ಕಿನ ಬೆಟ್ಟದಿಂದ ಬೀಸುವ ಬಿಸಿಗಾಳಿ ಮತ್ತು ಇಲ್ಲಿರುವ ಸಿಸಿ ರಸ್ತೆಯ ಕಾವಿನಿಂದ ಜನರು ಮತ್ತು ಪ್ರಾಣಿಗಳು ತಾಪದಿಂದ ಬಳಲುವಂತಾಗಿದೆ. ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳ ಸಂಖ್ಯೆ ಇಳಿಮುಖವಾಗಿದೆ. ಕೆಲವರು ಮನೆಯಿಂದ ಹೊರಗೆ ಬರುತ್ತಿಲ್ಲ. ಅನಿವಾರ್ಯವಾಗಿ ಫ್ಯಾನಿಗೆ ಮೊರೆ ಹೋಗಿದ್ದಾರೆ.

ಜನರು ತೆಂಗಿನ ಎಳೆನೀರು, ಮಜ್ಜಿಗೆ, ಕಲ್ಲಂಗಡಿ ಮತ್ತು ತಂಪಾದ ಪಾನೀಯ ಅಂಗಡಿಗಳಿಗೆ ಹೋಗಿ ಸ್ಪಲ್ಪ ಮಟ್ಟಿಗೆ ದೇಹವನ್ನು ತಂಪಾಗಿಸಿಕೊಳ್ಳುವರು. ಆದರೆ ಪ್ರಾಣಿಗಳು ಗಿಡದ ನೆರಳು ಮತ್ತು ನೀರನ್ನು ಹುಡುಕುತ್ತ ಹೋಗುತ್ತವೆ. ಬೆಟ್ಟದಲ್ಲಿ ವಾಸಿಸುವ ಮಂಗಗಳು ಅಗಸ್ತ್ಯತೀರ್ಥ ಹೊಂಡದಲ್ಲಿನ ನೀರನ್ನು ಮತ್ತು ಮನೆಯವರು ಹೊರಗೆ ಬಕೀಟಿನಲ್ಲಿ ತುಂಬಿಟ್ಟ ನೀರನ್ನು ಕುಡಿಯುತ್ತಿವೆ.

ADVERTISEMENT

ಮೇಣಬಸದಿಗೆ ಬಂದ ಪ್ರವಾಸಿಗರಿಂದ ಕೋತಿಗಳು ತಂಪಾದ ಪಾನೀಯ ಮತ್ತು ನೀರಿನ ಬಾಟಲ್ ಕಸಿದುಕೊಂದು ಕುಡಿಯುತ್ತವೆ. ಪ್ರವಾಸಿಗರಿಗೆ ಇದೊಂದು ಮೋಜಿನ ಸನ್ನಿವೇಶವೆನಿಸುತ್ತಿದ್ದು, ಕೋತಿಗಳು ಬಾಟಲಿ ಕಸಿದುಕೊಂಡು ಹೋಗಿ ನೀರು ಕುಡಿಯುವುದನ್ನು ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ.

ಈ ವರ್ಷ ಮಾರ್ಚ್‌ ತಿಂಗಳಿನಲ್ಲಿಯೇ ಇಷ್ಟೊಂದು ಬಿಸಿಲು ಹೆಚ್ಚಾಗಿದೆ. ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಇನ್ನೂ ಬಿಸಿಲು ಅಧಿಕವಾಗುವುದು ಎಂದು ಜನರು ಚಿಂತೆಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.