ಬಾಗಲಕೋಟೆ: ಓಣಿಯ ಮಠದಂತಿದ್ದ ಚರಂತಿಮಠವನ್ನು ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಾಡಿನ ಮಠವನ್ನಾಗಿಸಿ ಕೀರ್ತಿ ಪ್ರಭು ಸ್ವಾಮೀಜಿಯವರಿಗೆ ಸಲ್ಲುತ್ತದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.
ಬಿವಿವಿ ಸಂಘದ ವತಿಯಿಂದ ಶುಕ್ರವಾರ ಎಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪ್ರಭು ಸ್ವಾಮೀಜಿ ಅವರಿಗೆ ಗೌರವಾಭಿನಂದನೆ ಹಾಗೂ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಢನಂಬಿಕೆಗಳ ಪಿಡುಗುಗಳನ್ನು ತೊಡೆದು ಹಾಕುವ ಮೂಲಕ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಇಳಕಲ್ ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಅತ್ಯಂತ ಕ್ರಿಯಾಶೀಲ, ಅಧ್ಯಯನಶೀಲರಾಗಿ ಹೊಸ, ಹೊಸ ಚಿಂತನೆಗಳ ಮೂಲಕ ನಿತ್ಯ ನೂತನರಾಗಿದ್ದಾರೆ. ಅವರ ವಿಚಾರಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದರು.
ಗೌರವಾಭಿನಂದನೆ ಸ್ವೀಕರಿಸಿದ ಚರಂತಿಮಠದ ಪ್ರಭು ಸ್ವಾಮೀಜಿ ಮಾತನಾಡಿ, ಜಗತ್ತನ್ನೆ ಸೆಳೆಯುವ ಶಕ್ತಿ ಭಾರತೀಯ ಸಂಸ್ಕೃತಿಗೆ ಇದೆ. ಅದಕ್ಕೆ ಎಲ್ಲ ಶಾಲಾ, ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಶಿಕ್ಷಣ ಪಡೆದರೂ ಸಹಿತ ಮಾನವೀಯತೆ ಎಂಬ ಸಂಸ್ಕೃತಿಯಲ್ಲಿ ಬದುಕಿದಾಗ ಮಾತ್ರ ಮನುಷ್ಯ, ಮನುಷ್ಯಾಗಿ ಜೀವನ ಸಾಗಿಸುತ್ತಾನೆ. ಇಲ್ಲದಿದ್ದರೆ, ಯಾಂತ್ರಿಕವಾಗಿ ಬದುಕುತ್ತಾನೆ. ಬಿವಿವಿ ಸಂಘವು ನಾಡಿಗೆ ಕುಲಪತಿ, ವಿಜ್ಞಾನಿ, ಸಮಾಜ ಚಿಂತಕರು ಸೇರಿದಂತೆ ಹಲವು ಸಾಧಕರನ್ನು ನಾಡಿಗೆ ನೀಡಿದೆ ಎಂದರು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.