
ಮಹಾಲಿಂಗಪುರ: ‘ಪ್ರತಿಯೊಬ್ಬರಲ್ಲೂ ಸ್ವದೇಶಿ ಭಾವ ಮೂಡಬೇಕಿದೆ. ಕೇವಲ ಸ್ವದೇಶಿ ವಸ್ತುಗಳನ್ನು ಖರೀದಿಸಿದರೆ ಸಾಲದು. ಪ್ರತ್ಯಕ್ಷವಾಗಿ ವ್ಯವಹಾರ, ನಡುವಳಿಕೆಯಲ್ಲಿ ಸ್ವದೇಶಿತನ ಎದ್ದು ಕಾಣಬೇಕು. ಮಾನವ ಕಲ್ಯಾಣಕ್ಕೆ ಸಾವಯವ ಕೃಷಿಯನ್ನು ಮತ್ತೊಮ್ಮೆ ತರಬೇಕಿದೆ’ ಎಂದು ವಿಜಯಪುರ ಜಿಲ್ಲಾ ಸಹ ಸಂಪರ್ಕ ಪ್ರಮುಖ ವಿವೇಕ ಹಂಜಗಿ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಶತಾಬ್ದಿ ಹಾಗೂ ವಿಜಯದಶಮಿ ಅಂಗವಾಗಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
'ರಾಷ್ಟ್ರಕ್ಕಾಗಿ ಪ್ರಬುದ್ಧ ನಾಗರಿಕನಾಗಿ ಕೆಲಸ ಮಾಡಬೇಕಿದೆ. ಸಾಮರಸ್ಯದ ಭಾವ ಜಾಗೃತರಾಗಬೇಕಿದೆ. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಯೋಚನೆ ಹೊಂದಿರುವ ಸಂಘದ ಮೇಲೆ ಇಂದು ನಿಷೇಧ ಹೇರುವ ಕೆಲಸ ನಡೆಯುತ್ತಿದೆ. ಅಧಿಕಾರ ಬಲದಿಂದ ಇದನ್ನು ತಡೆಯಲು ಸಾಧ್ಯವಿಲ್ಲ. ಸಂಘದ ಮೇಲೆ ಆರೋಪ ಮಾಡುತ್ತಿರುವವರು ಸಂಘದ ಒಳಗಡೆ ಬಂದು ಏನಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದರು.
‘ಸಮಾಜದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಭಯೋತ್ಪಾದನೆ, ಮತಾಂತರ ರೀತಿಯ ದೇಶ ವಿರೋಧಿ ಚಟುವಟಿಕೆ ನಡೆಯುತ್ತಿವೆ. ಹೊಸ ಹೊಸ ಸವಾಲುಗಳು ಹಿಂದು ಸಮಾಜದ ಮೇಲಿದೆ. ಹಿಂದು ಸಮಾಜವನ್ನು ದುರ್ಬಲಗೊಳಿಸಲು ಹಿಂದು ಶ್ರದ್ಧಾಬಿಂದುಗಳನ್ನು ಕೇಂದ್ರೀಕರಿಸಲಾಗುತ್ತಿದೆ. ಈಚೆಗೆ ದೇವಸ್ಥಾನಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು. ಮಕ್ಕಳ ತಜ್ಞ ವಿಶ್ವನಾಥ ಗುಂಡಾ ವೇದಿಕೆ ಮೇಲಿದ್ದರು.
ಅದ್ದೂರಿ ಪಥಸಂಚಲನ: ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ಸಂಘದ ವತಿಯಿಂದ ಗಣವೇಷಧಾರಿಗಳ ಶಿಸ್ತುಬದ್ಧ ಆಕರ್ಷಕ ಪಥಸಂಚಲನ ಅದ್ದೂರಿಯಾಗಿ ನಡೆಯಿತು. ಶುಭ್ರ ಬಿಳಿ ವರ್ಣದ ಅಂಗಿ, ಖಾಕಿ ಬಣ್ಣದ ಪ್ಯಾಂಟ್, ತಲೆ ಮೇಲೆ ಟೊಪ್ಪಿಗೆ ಹೀಗೆ ಆರ್‍ಎಸ್‍ಎಸ್ ಸಾಂಪ್ರದಾಯಿಕ ಉಡುಗೆ ತೊಟ್ಟ ಸಾವಿರಾರು ಸ್ವಯಂ ಸೇವಕರು ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದ್ದು ನೋಡುಗರ ಮನಸೆಳೆಯಿತು. ಶಾಸಕ ಸಿದ್ದು ಸವದಿ ಸೇರಿದಂತೆ ಮುಖಂಡರು ಗಣವೇಷಧಾರಿಗಳಾಗಿ ಹೆಜ್ಜೆ ಹಾಕಿದರು.
ಪಥಸಂಚಲನ ಸಾಗುವ ಮಾರ್ಗದಲ್ಲಿ ಹೂ ಚೆಲ್ಲಿ, ಬಣ್ಣ ಬಣ್ಣದ ಚಿತ್ತಾರದ ರಂಗೋಲಿ ಬಿಡಿಸಿ ಸಾರ್ವಜನಿಕರು ಸ್ವಾಗತ ಕೋರಿ, ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದು ‘ಭಾರತ ಮಾತಾಕೀ ಜೈ’ ಎನ್ನುವ ಜಯಘೋಷ ಕೂಗಿದರು.
ಸುಶ್ರಾವ್ಯವಾದ ಡ್ರಮ್ ಮತ್ತಿತರ ವಾದ್ಯಗಳಿಂದ ಮೊಳಗಿದ ಹಿಮ್ಮೇಳವು ಪಥಸಂಚಲನಕ್ಕೆ ಮೆರಗು ನೀಡಿತು. ಬುದ್ನಿ ಪಿಡಿಯ ಚಂದ್ರುಗೌಡ ಪಾಟೀಲ ಮೈದಾನದಿಂದ ಆರಂಭಗೊಂಡ ಪಥಸಂಚಲನವು ಪ್ರಮುಖ ಮಾರ್ಗದ ಮೂಲಕ ವಾಸವಿ ಕಲ್ಯಾಣ ಮಂಟಪಕ್ಕೆ ತೆರಳಿ ಸಂಪನ್ನಗೊಂಡು, ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು. ಪಂಥಸಂಚಲನದುದ್ದಕ್ಕೂ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.