ಕೂಡಲಸಂಗಮ: ಅಲ್ಪ ಭೂಮಿಯಲ್ಲಿಯೇ ವ್ಯವಸ್ಥಿತ ಕೃಷಿಯ ಮೂಲಕ ಉತ್ತಮ ಆದಾಯ ಪಡೆಯಬಹುದು ಎಂಬುದನ್ನು ಕೂಡಲಸಂಗಮ ರೈತ ಬಸವರಾಜ ಗೌಡರ ತೋರಿಸಿಕೊಟ್ಟಿದ್ದಾರೆ.
ಸಮಗ್ರ ಬೇಸಾಯ, ತರಕಾರಿ ಕೃಷಿ ಮಾಡುವ ಮೂಲಕ 4 ಎಕರೆ ಭೂಮಿಯಲ್ಲಿ ಉತ್ತಮ ಆದಾಯ ಪಡೆದು ನೆಮ್ಮದಿಯ ಬದುಕು ಕಟ್ಟಿದ್ದಾರೆ.
20 ಗುಂಟೆ ಭೂಮಿಯಲ್ಲಿ 8 ಅಡಿ ಅಗಲ 8 ಅಡಿ ಉದ್ದದ ಅಳತೆಯಲ್ಲಿ 500 ರಾಜಾಪುರಿ ಬಾಳೆ ಗಿಡಗಳನ್ನು ಹಚ್ಚಿ ಫಸಲು ಪಡೆಯುತ್ತಿದ್ದಾರೆ. ರಾಜಾಪುರಿ ಬಾಳೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಗುತ್ತಿಗೆದಾರರೇ ಅವರ ಜಮೀನಿಗೆ ಬಂದು ಬಾಳೆ ಗೊನೆಗಳನ್ನು ಕಟಾವು ಮಾಡಿಕೊಂಡು, ತೆಗೆದುಕೊಂಡು ಹೋಗುತ್ತಾರೆ.
‘ಬಾಳೆ ಗಿಡ ಹಚ್ಚಿದ 9 ತಿಂಗಳಿಗೆ ಫಸಲು ಬರಲು ಆರಂಭವಾಗುತ್ತದೆ. ರೈನ್ ಪೈಪ್ ನೀರಾವರಿ ಪದ್ಧತಿ ಅಳವಡಿಕೆ ಮಾಡಿಕೊಂಡಿದ್ದರಿಂದ ಕಾರ್ಮಿಕರ ಅಗತ್ಯ ಇಲ್ಲ. ಬೆಳಿಗ್ಗೆ, ಸಂಜೆ ಒಂದೆರಡು ಗಂಟೆ ನಾನೇ ಕೆಲಸ ಮಾಡುತ್ತೇನೆ. ಉಳಿದ ಅವಧಿಯಲ್ಲಿ ಕುಟುಂಬದ ಸದಸ್ಯರು ಸಹಾಯ ಮಾಡುತ್ತಾರೆ. 20 ಗಂಟೆ ಬಾಳೆ ಕೃಷಿಯಿಂದಲೇ ಖರ್ಚು ಕಳೆದು ವಾರ್ಷಿಕ ₹1 ಲಕ್ಷ ಉಳಿತಾಯವಾಗುತ್ತದೆ’ ಎನ್ನುತ್ತಾರೆ ರೈತ ಬಸವರಾಜ.
ಒಟ್ಟು 4 ಎಕರೆ ಭೂಮಿಯಲ್ಲಿ ಅವರು ಸಮಗ್ರ ಕೃಷಿ ಮಾಡುತ್ತಿದ್ದಾರೆ. ಜಮೀನಿನ ಬದುವಿಗೆ 60 ಪೇರಲ, 10 ಮಾವು, 10 ನೇರಳೆ, 10 ನಿಂಬೆ ಮುಂತಾದ ಹಣ್ಣಿನ ಗಿಡಗಳನ್ನು ಮೂರು ವರ್ಷಗಳ ಹಿಂದೆ ಹಚ್ಚಿದ್ದು, ಅವುಗಳಿಂದಲೂ ಫಸಲು ಬರುತ್ತಿದೆ. ಬೇರೆ 16 ಎಕರೆ ಭೂಮಿಯಲ್ಲಿ ಕಬ್ಬು ಬೇಸಾಯ ಮಾಡುತ್ತಿದ್ದು ಅದರಿಂದಲೂ ವಾರ್ಷಿಕವಾಗಿ ಆದಾಯ ಪಡೆಯುತ್ತಿದ್ದಾರೆ.
‘ಒಂದು ಎಕರೆ ಭೂಮಿಯಲ್ಲಿ ಅವಧಿಗೆ ಅನುಗುಣವಾಗಿ ತರಕಾರಿ, ಹೂವುಗಳನ್ನು ಬೆಳೆಯುತ್ತೇವೆ. ಎರಡು ಎಕರೆ ಭೂಮಿಯಲ್ಲಿ ಉಳ್ಳಾಗಡ್ಡೆ, ಕಡಲೆ ಮುಂತಾದ ಸಾಂಪ್ರದಾಯಿಕ ಬೇಸಾಯ ಮಾಡುತ್ತೇವೆ. ವಾರ್ಷಿಕವಾಗಿ ಎಲ್ಲ ಖರ್ಚು ಕಳೆದ ಕನಿಷ್ಠ ₹5ಲಕ್ಷದಿಂದ ₹6 ಲಕ್ಷ ಉಳಿತಾಯ ಆಗುತ್ತಿದೆ’ ಎಂದು ಅವರು ತಿಳಿಸಿದರು.
ಕೂಡಲಸಂಗಮ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಐದು ವರ್ಷ ಕಾರ್ಯನಿರ್ವಹಿಸಿದ ಇವರು, ರಾಜಕೀಯ, ಸಾಮಾಜಿಕ ಕಾರ್ಯದೊಂದಿಗೆ ಕೃಷಿ ಮಾಡುತ್ತಿದ್ದಾರೆ. ಕೃಷಿ ಕಾಯಕ ಬದುಕಿಗೆ ನೆಮ್ಮದಿ ಕೊಟ್ಟಿದೆ.
ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ. ಬೆಳಿಗ್ಗೆ ಸಂಜೆ ಕೃಷಿ ಕಾಯಕ ಮಾಡುತ್ತೇನೆ. ಉಳಿದ ಅವಧಿಯಲ್ಲಿ ಸಾಮಾಜಿಕ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸುವೆಬಸವರಾಜ ಗೌಡರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.