
ಬಾಗಲಕೋಟೆ: ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹ ಮಾಡುವ ಉದ್ದೇಶದಿಂದ ಫೆ.16 ರಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಕರ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶನಿವಾರ ನಡೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಕರ ವಸೂಲಾತಿಯ ಗುರಿಯನ್ನು ನಿಗದಿತ ಅವಧಿಯೊಳಗೆ ಮುಟ್ಟಬೇಕಾಗಿದೆ. ಇಲ್ಲಿಯವರೆಗೆ ಶೇ70.35 ರಷ್ಟು ಮಾತ್ರ ಕರ ವಸೂಲು ಮಾಡಲಾಗಿದೆ. ಶೇ100 ರಷ್ಟು ಪ್ರಗತಿ ಸಾಧಿಸಲು ಎರಡು ತಿಂಗಳು ಮಾತ್ರವಿದೆ. ಆದ್ದರಿಂದ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ವಿಶೇಷ ಅಭಿಯಾನದಲ್ಲಿ ₹5 ಕೋಟಿ ವಸೂಲಾತಿ ಗುರಿ ಸಾಧಿಸಬೇಕದೆ. ಪ್ರತಿಯೊಂದು ತಾಲ್ಲೂಕಿಗೆ ಗುರಿ ನಿಗದಿ ಮಾಡಲಾಗಿದೆ. ಗುರಿ ಮುಟ್ಟುವ ರೀತಿಯಲ್ಲಿ ಕರ ವಸೂಲಾತಿ ಕಾರ್ಯ ನಡೆಯಬೇಕು. ಬಾಕಿ ಉಳಿಸಿಕೊಂಡವರ ಪಟ್ಟಿ ಸಿದ್ದಪಡಿಸಿಕೊಳ್ಳುವ ಕೆಲಸ ತುರ್ತಾಗಿ ಮಾಡಬೇಕು. ಪ್ರತಿ ತಾಲ್ಲೂಕಿಗೂ ಜಿಲ್ಲಾ ಮಟ್ಟದ ಮೂವರು ಅಧಿಕಾರಿಗಳನ್ನು ನೇಮಿಸಿಲಾಗುತ್ತಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿ ನೇಮಿಸಿ ಪಟ್ಟಿ ನೀಡಬೇಕು ಎಂದು ಸೂಚಿಸಿದರು.
ಕರ ವಸೂಲಾತಿಯಲ್ಲಿ ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಗ್ರಾಮ ಪಂಚಾಯಿತಿ ಪ್ರಥಮ, ಬಾಗಲಕೋಟೆ ತಾಲ್ಲೂಕಿನ ಭಗವತಿ ಗ್ರಾಮ ಪಂಚಾಯಿತಿ ದ್ದಿತೀಯ, ಜಮಖಂಡಿ ತಾಲ್ಲೂಕಿನ ಮದರಖಂಡಿ ಗ್ರಾಮ ಪಂಚಾಯಿತಿ ತೃತೀಯ ಸ್ಥಾನದಲ್ಲಿವೆ. ವಸೂಲಾತಿ ಪ್ರಗತಿ ಹೆಚ್ಚಿಸುವ ಕೆಲಸ ಆಗಬೇಕು ಎಂದರು.
ಸಂಪೂರ್ಣವಾಗಿ ವೇತನ ಪಾವತಿಸಿ. ಬಾಕಿ ಉಳಿದಿರುವ ಗ್ರಂಥಾಲಯ ಸಿಬ್ಬಂದಿ ವೇತನವನ್ನೂ ಪಾವತಿ ಮಾಡಬೇಕು. 15ನೇ ಹಣಕಾಸು ಯೋಜನೆ ಅನುದಾನದಡಿ ಬಿಡುಗಡೆಯಾದ ಅನುದಾನ ಸಂಪೂರ್ಣ ಖರ್ಚು ಆಗಬೇಕು. ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಬಿಲ್ ಪಾವತಿಗೆ ಕ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ. ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಅಲ್ಲಮಪ್ರಭು, ಯೋಜನಾ ನಿರ್ದೇಶಕ ಎಸ್.ಎಂ.ಕಾಂಬಳೆ ಉಪಸ್ಥಿತರಿದ್ದರು.
ಬೀದಿ ನಾಯಿಗಳಿಗೆ ಆಶ್ರಯ ತಾಣಗ್ರಾಮೀಣ ಭಾಗದಲ್ಲಿಯೂ ಸಹ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮಕೈಗೊಳ್ಳಲಾಗುತ್ತಿದ್ದು ಈಗಾಗಲೇ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್‍ನಲ್ಲಿ ಬೀದಿ ನಾಯಿಗಳಿಗೆ ಆಶ್ರಯ ತಾಣ ನಿರ್ಮಾಣ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗುವ ಕೆಲಸ ಮಾಡಿದ್ದಾರೆ ಎಂದು ಕುರೇರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.