
ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಆಂಜನೇಯ ದೇವಸ್ಥಾನದ ಸೌಲಭ್ಯಗಳನ್ನು ಶಾಸಕ ಜೆ.ಟಿ. ಪಾಟೀಲ ಪರಿಶೀಲಿಸಿದರು
ಬಾಗಲಕೋಟೆ: ಐತಿಹಾಸಿಕ ತುಳಸಿಗೇರಿ ಆಂಜನೇಯ ದೇವಸ್ಥಾನದ ಮೂಲಸೌಲಭ್ಯ ಅಭಿವೃದ್ಧಿಗೆ ₹1.70 ಕೋಟಿ ವೆಚ್ಚದ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಶಾಸಕ ಜೆ.ಟಿ.ಪಾಟೀಲ, ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ತುಳಸಿಗೇರಿ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಸುತ್ತ ಮುತ್ತಲಿನ ಮೂಲ ಸೌಲಭ್ಯಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ಬೇರೆ, ಬೇರೆ ರಾಜ್ಯಗಳ ಭಕ್ತರೂ ತುಳಸಿಗೇರಿಗೆ ಬರುತ್ತಿದ್ದು, ಪ್ರತಿ ವರ್ಷ ದೇವಸ್ಥಾನಕ್ಕೆ ₹30 ರಿಂದ 35 ಲಕ್ಷ ಆದಾಯ ಬರುತ್ತಿದೆ ಎಂದರು.
ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯಗಳ ಕೊರತೆ ಇದ್ದು, ದೇವಸ್ಥಾನದಿಂದ ಸಂಗ್ರಹವಾದ ₹1.70 ಕೋಟಿ ಅನುದಾನದಲ್ಲಿ ಅದರ ವ್ಯವಸ್ಥಿತ ಬಳಕೆ ಕುರಿತಂತೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ರೊಂದಿಗೆ ಚರ್ಚಿಸಿ ಕಾಮಗಾರಿ ಪ್ರಾರಂಭಿಸಲು ತಿಳಿಸಿದರು.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲಸೌಲಭ್ಯಗಳಾದ ಶೌಚಾಲಯ, ಸ್ನಾನದ ಗೃಹ, ವ್ಯವಸ್ಥಿತ ಪಾರ್ಕಿಂಗ್ ನಿರ್ಮಾಣ, ಕಾಂಪೌಂಡ್ ನಿರ್ಮಾಣ, ದೇವಸ್ಥಾನಕ್ಕೆ ಬಣ್ಣ ಹಾಗೂ ವಿದ್ಯುತ್ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಶೀಘ್ರ ಕ್ರಿಯಾ ಯೋಜನೆ ರೂಪಿಸಬೇಕು. ಕಾಮಗಾರಿ ರೂಪಿಸುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಜಿಲ್ಲಾಧಿಕಾರಿ ಸಂಗಪ್ಪ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹಿತ್ತಲಮನಿ, ತಹಶೀಲ್ದಾರ್ ವಾಸುದೇವ ಸ್ವಾಮಿ, ಭೂ ದಾಖಲೆಯ ಸಹಾಯಕ ನಿರ್ದೇಶಕ ಮಹೇಶ ಪತ್ತಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.