ತೇರದಾಳ: ಚರಂಡಿ ಹೂಳೆತ್ತಿದ್ದನ್ನು ಅಲ್ಲಿಯೇ ಬಿಡುವುದರಿಂದ ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗಿ ಬರುವ ಭಕ್ತರಿಗೆ ತೊಂದರೆಯಾಗುತ್ತಿದೆ, ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದರೂ ಕ್ರಮ ಕೈಗೊಂಡಿಲ್ಲ, ಸಮರ್ಪಕ ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆ ಇಲ್ಲ, ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಪುರಸಭೆ ಸದಸ್ಯರು ಆರೋಪಿಸಿದರು.
ಇಲ್ಲಿನ ಪುರಸಭೆಯ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮತ್ತು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು.
ನಮ್ಮ ವಾರ್ಡ್‌ನಲ್ಲಿ ಕಳಪೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರ ಮುರುಗೇಶ ಮಿರ್ಜಿ ವಿರುದ್ದ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲವೆಂಬ ಸದಸ್ಯ ಸಂತೋಷ ಜಮಖಂಡಿ ಅವರ ಆರೋಪಕ್ಕೆ ಇನ್ನೊಬ್ಬ ಸದಸ್ಯ ಫಯಾಜ ಇನಾಮದಾರ ಧ್ವನಿಗೂಡಿಸಿ, ಯಾವ ಗುತ್ತಿಗೆದಾರರು ಸರಿಯಾಗಿ, ಕಳಪೆರಹಿತ ಕಾಮಗಾರಿ ಮಾಡುತ್ತಿಲ್ಲ ಎಂದರು.
ಇದಕ್ಕೆ ಉತ್ತರಿಸಿದ ಪುರಸಭೆ ಕಿರಿಯ ಎಂಜಿನಿಯರ್ ಭಾಗ್ಯಶ್ರೀ ಪಾಟೀಲ್ ಈಗಾಗಲೇ ಈ ಕುರಿತು ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದು, ಸರಿಪಡಿಸಿಕೊಳ್ಳದಿದ್ದರೆ ಇನ್ನೆರಡು ನೋಟಿಸ್ ನೀಡಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದರು.
ಚರಂಡಿಯಿಂದ ಹೂಳೆತ್ತಿ ರಸ್ತೆ ಮೇಲೆಯೆ ಬಿಡುವುದರಿಂದ ನಸುಕಿನಲ್ಲಿ ದೇವಸ್ಥಾನಗಳಿಗೆ ತೆರಳುವ ಭಕ್ತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸದಸ್ಯೆ ಕುಶಮಾಂಡಿನಿ ಬಾಬಗೊಂಡ ಹೇಳಿದರೆ, ಪಟ್ಟಣದಲ್ಲಿ ನೀರು ಸರಬರಾಜು ಸರಿಯಾಗಿ ಆಗುತ್ತಿಲ್ಲ, ಜಾಕ್‌ವೆಲ್‌ನಲ್ಲಿ ಹಳೆಯ ಪಂಪ್‌ಸೆಟ್ ಇರುವುದರಿಂದ, ಪೈಪ್‌ಲೈನ್ ಹಾಳಾಗಿ ಸಮಸ್ಯೆಯಾಗುತ್ತಿದೆ ಅದನ್ನು ಸರಿಪಡಿಸದಿದ್ದರೆ ಸಾರ್ವಜನಿಕರಿಂದ ಸಂಗ್ರಹಿಸುವ ನೀರಿನ ಬಿಲ್ ₹1,260 ಬದಲಿ ಅರ್ಧ ಸಂಗ್ರಹಿಸಿ ಎಂದು ಸಂತೋಷ ಜಮಖಂಡಿ ಹೇಳಿದರು.
ಪುರಸಭೆ ಮಳಿಗೆಗಳಿಂದ ಬಾಡಿಗೆ ಸಂಗ್ರಹವಾಗಿರುವ ಹಣವನ್ನು ಪುರಸಭೆ ಖಾಲಿ ಜಾಗದಲ್ಲಿ ಮತ್ತೆ ಮಳಿಗೆಗಳನ್ನು ಕಟ್ಟಿ, ಮಟನ್ ಮಾರ್ಕೆಟ್ ದುರಸ್ತಿಗೆ ಬಳಸಬೇಡಿ ಎಂದು ಸದಸ್ಯ ಸಚಿನ್ ಕೊಡತೆ ಆಗ್ರಹಿಸಿದರು.
ಕಾಶೀನಾಥ ರಾಠೋಡ, ಸುರೇಶ ಕಬಾಡಗಿ ಸೇರಿದಂತೆ ಹಲವು ಸದಸ್ಯರು ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗುವಂತೆ ತಿಳಿಸಿದರು.
ಈ ನಡುವೆ ಸಮರ್ಪಕ ಬೀದಿ ದೀಪ ನಿರ್ವಹಣೆ ಮಾಡುವಲ್ಲಿ ವಿಳಂಬ ನೀತಿ, ಸಾರ್ವಜನಿಕರಿಗೆ ಸ್ಪಂದಿಸದ ಗುತ್ತಿಗೆದಾರ ಪ್ರಭು ಯಡವಣ್ಣವರ ಅವರ ಟೆಂಡರ್ ರದ್ದುಗೊಳಿಸಲು ಠರಾವುಗೊಳಿಸಲಾಯಿತು.
ಪುರಸಭೆ ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ, ಉಪಾಧ್ಯಕ್ಷೆ ನಸ್ರೀನಬಾನು ರಾಜೇಸಾಬ ನಗಾಜರ್, ಸ್ಥಾಯಿ ಸಮಿತಿ ಚೇರ್ಮನ್ ಕುಮಾರ ಸರಿಕರ, ಮುಖ್ಯಾಧಿಕಾರಿ ಎಫ್.ಬಿ.ಗಿಡ್ಡಿ, ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಬಿರಾದಾರ ಪಾಟೀಲ್, ಕಿರಿಯ ಆರೋಗ್ಯ ಸಹಾಯಕ ಇರ್ಫಾನ್ ಝಾರೆ, ಸದಸ್ಯರಾದ ಆದೀನಾಥ ಸಪ್ತಸಾಗರ, ಫಜಲ್ ಅತಾರಾವುತ್ ಸೇರಿದಂತೆ ಅನೇಕರು ಇದ್ದರು.
ಗುತ್ತಿಗೆದಾರರ ಮುರುಗೇಶ ಮಿರ್ಜಿ ವಿರುದ್ದ ದೂರು ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ನೀರಿನ ಬಿಲ್ ಅರ್ಧ ಸಂಗ್ರಹಿಸಲು ಒತ್ತಾಯ ಗುತ್ತಿಗೆದಾರ ಪ್ರಭು ಟೆಂಡರ್ ರದ್ದುಗೊಳಿಸಲು ಠರಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.