ADVERTISEMENT

ಕೋವಿಡ್‌: ಬಿಗಡಾಯಿಸಿದ ಡಾ.ಗೋಪಾಲ್ ಕಾರಜೋಳ ಆರೋಗ್ಯ

ಮುಂದಿನ 48 ಗಂಟೆಗಳ ಚಿಕಿತ್ಸೆ ಮಹತ್ವದ್ದು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 16:40 IST
Last Updated 18 ಅಕ್ಟೋಬರ್ 2020, 16:40 IST
ಡಾ.ಗೋಪಾಲ್ ಕಾರಜೋಳ
ಡಾ.ಗೋಪಾಲ್ ಕಾರಜೋಳ   

ಬಾಗಲಕೋಟೆ: ‘ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಮೊದಲ ಪುತ್ರ ಡಾ.ಗೋಪಾಲ್ ಕೋವಿಡ್ ಚಿಕಿತ್ಸೆಗೆ ಸ್ಪಂದಿಸಿ, ಗುಣಮುಖರಾಗಿ ಮನೆಗೆ ಬರಲಿ‘ ಎಂಬುದುವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಕಾರಜೋಳ ಕುಟುಂಬದ ಸಾವಿರಾರು ಮಂದಿ ಹಿತೈಷಿಗಳು, ಬೆಂಬಲಿಗರ ಪ್ರಾರ್ಥನೆ.

ಡಿಸಿಎಂ ಗೋವಿಂದ ಕಾರಜೋಳ ನಾಲ್ವರು ಪುತ್ರರಲ್ಲಿ ಗೋಪಾಲ್ ಅಕ್ಕರೆಯ ಕೂಸು. ವಿಜಯಪುರ ಜಿಲ್ಲೆಯಲ್ಲಿ ಜನಾನುರಾಗಿ ವೈದ್ಯ. ಕಳೆದ 23 ದಿನಗಳಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿರುವ ಕಾರಣ ಭಾನುವಾರ ಸಂಜೆ ಅವರನ್ನು ಹೈದರಾಬಾದ್‌ನ ಶ್ರೀಕೃಷ್ಣಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕೋವಿಡ್ ಸೋಂಕಿನಿಂದ ಹಾನಿಗೀಡಾಗಿರುವ ಡಾ.ಗೋಪಾಲ್ ಅವರ ಶ್ವಾಸಕೋಶಕ್ಕೆ ಅಗತ್ಯಬಿದ್ದಲ್ಲಿ ಕಸಿ ಚಿಕಿತ್ಸೆ ಸೇರಿದಂತೆ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ ಶ್ರೀಕೃಷ್ಣಾ ಆಸ್ಪತ್ರೆಯಲ್ಲಿ ಇದೆ. ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಸುದರ್ಶನ್ ಬಲ್ಲಾಳ ಅವರ ಸಲಹೆಯ ಮೇರೆಗೆ ಅವರನ್ನು ಅಲ್ಲಿಗೆ ಕರೆದೊಯ್ಯಲಾಗಿದೆ.

ADVERTISEMENT

ಡಾ. ಗೋಪಾಲ್ ಅವರಿಗೆ ಚಿಕಿತ್ಸೆ ಕೊಡಿಸುವ ಹೊಣೆ ಹೊತ್ತಿರುವ ಅವರ ತಮ್ಮ ಡಾ.ಉದಯ ಕಾರಜೋಳ, ಅಳಿಯ ಡಾ.ದೇವೇಂದ್ರ ಜಲ್ದೆ ಸೇರಿದಂತೆ ನಾಲ್ವರು ವೈದ್ಯರ ತಂಡ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳಿದೆ. ಡಾ.ಉದಯ ಕಾರಜೋಳ ಈ ಹಿಂದೆ ಶ್ರೀಕೃಷ್ಣಾ ಆಸ್ಪತ್ರೆಯಲ್ಲಿ ಕೆಲಸ ಮಾಡಿರುವುದು ಈಗ ಅಣ್ಣನಿಗೆ ಚಿಕಿತ್ಸೆ ಕೊಡಿಸಲು ನೆರವಾಗಿದೆ. ಡಾ.ಗೋಪಾಲ್ ಅವರ ಚೇತರಿಕೆ ವಿಚಾರದಲ್ಲಿ ಮುಂದಿನ 48 ಗಂಟೆಗಳ ಕಾಲದ ಚಿಕಿತ್ಸೆ ಮಹತ್ವದ್ದು ಎಂದು ತಿಳಿದುಬಂದಿದೆ.

ಎಂಟು ಮಂದಿಗೆ ಸೋಂಕು: ಗೋವಿಂದ ಕಾರಜೋಳ ಹಾಗೂ ಅವರ ಪತ್ನಿ, ಪುತ್ರ ಗೋಪಾಲ್ ಸೇರಿದಂತೆ ಕುಟುಂಬದ ಎಂಟು ಮಂದಿಗೆ ಕೋವಿಡ್ ಸೋಂಕು ತಗುಲಿತ್ತು. ಅವರಲ್ಲಿ ಏಳು ಮಂದಿ ಚೇತರಿಸಿಕೊಂಡಿದ್ದಾರೆ. ಆದರೆ ಗೋಪಾಲ್ ಅವರ ಆರೊಗ್ಯ ಸ್ಥಿತಿ ಬಿಗಡಾಯಿಸಿದೆ.

ಟ್ವೀಟ್‌ನಲ್ಲಿ ಕಾರಜೋಳ ಬೇಸರ..
ಸಾರ್ವಜನಿಕ ಬದುಕಿನಲ್ಲಿರುವವರ ವೈಯಕ್ತಿಕ ಸಂತಸ- ಸಂಕಟಗಳು ಹೊರ ಪ್ರಪಂಚಕ್ಕೆ ಅಷ್ಟಾಗಿ ತಿಳಿದಿರುವುದಿಲ್ಲ. ಸಂತಸಗಳು ಕೆಲವೊಮ್ಮೆ ಹೊರಗೆ ಬರುತ್ತವೆ. ಆದರೆ ಸಂಕಷ್ಟಗಳು ಯಾವತ್ತಿಗೂ ಅನಾಥ. ಅದನ್ನು ಅನುಭವಿಸಿದರಿಗಷ್ಟೇ ಅದರ ಪ್ರಖರತೆ ಗೊತ್ತು. ಇದರ ಪರಿಣಾಮ ಸಾರ್ವಜನಿಕ ಬದುಕಿನಲ್ಲಿರುವವರ ಹಾಜರಿ ಅಥವಾ ಗೈರುಹಾಜರಿಗಳನ್ನು ಕನ್ನಡಕ ಹಾಕಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಪುತ್ರನನ್ನು ಚಿಕಿತ್ಸೆಗೆ ಹೈದರಾಬಾದ್‌ಗೆ ಕಳುಹಿಸಿದ ನಂತರ ಡಿಸಿಎಂ ಗೋವಿಂದ ಕಾರಜೋಳ ಟ್ವೀಟ್ ಮೂಲಕ ಬೇಸರ ತೋಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.