ಬಾಗಲಕೋಟೆ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ ಮುಡಾ ಹಗರಣದಲ್ಲಿ ಕಳಚಿ ಬಿದ್ದಿದೆ’ ಎಂದು ಸಂಸದ ಜಗದೀಶ ಶೆಟ್ಟರ್ ಟೀಕಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ. ಭ್ರಷ್ಟಾಚಾರದ ಆರೋಪವಿಲ್ಲ. ಕಪ್ಪು ಚುಕ್ಕೆ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವಿತ್ ಡ್ರಾ ಮಾಡಿದಾಗ ಏಕೆ ಸುಮ್ಮನೆ ಕುಳಿತಿದ್ರಿ. ಹಣಕಾಸು ಇಲಾಖೆಗೆ ಬರದೇ ಇಷ್ಟೊಂದು ಹಣ ಬೇರೆ ಖಾತೆಗಳಿಗೆ ಜಮಾ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯನೂ ಶಾಮೀಲಾಗಿರುವುದರಿಂದ ಹಣಕಾಸು ಇಲಾಖೆಯವರು ಪ್ರಶ್ನಿಸಿಲ್ಲ. ಸಿಬಿಐ ತನಿಖೆಗೆ ಕೊಟ್ಟರೆ ಎಲ್ಲ ನಿಜ ಹೊರಗೆ ಬರುತ್ತದೆ. ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಬಿಜೆಪಿ ಹೋರಾಟ ತೀವ್ರಗೊಳಿಸಲಿದೆ’ ಎಂದರು.
‘ಲೇಔಟ್ ಮಾಡಿದರೂ ಇವರಿಗೆ ಗೊತ್ತಾಗಲಿಲ್ಲವಂತೆ. ಬೇಕು ಅಂತಲೇ ಸುಮ್ಮನೆ ಕುಳಿತು, ಈಗ ನಿವೇಶನಗಳನ್ನು ಪಡೆದಿದ್ದಾರೆ‘ ಎಂದು ಆರೋಪಿಸಿದರು.
‘ಹಿಂದೆ ಅರ್ಕಾವತಿ ಪ್ರಕರಣದ ತನಿಖೆಗೆ ನೇಮಿಸಿದ್ದ ಕೆಂಪಣ್ಣ ಆಯೋಗದ ವರದಿ ಏನಾಯ್ತು. ಅದನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಬೇಕು. ನೀವು ನಿರಪರಾಧಿ ಆಗಿದ್ದರೆ ಜನರಿಗೂ ಗೊತ್ತಾಗಲಿ’ ಎಂದು ಆಗ್ರಹಿಸಿದರು.
‘ಭ್ರಷ್ಟಾಚಾರದ ವಿಚಾರದಲ್ಲಿ ಜಾತಿ ತರಲೇ ಬಾರದು. ಭ್ರಷ್ಟಾಚಾರ, ಹಗರಣಕ್ಕೆ ಜಾತಿ ಸಂಬಂಧ ಇರಲ್ಲ. ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದಿಂದ ಬಂದವರು. ಅವರ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲಿಲ್ಲವೇ? ಅವರ ವಿರುದ್ಧ ಎಷ್ಟು ಆರೋಪ ಮಾಡಿದರು. ಈಗ ಭ್ರಷ್ಟಾಚಾರ ಆರೋಪ ಬಂದೊಡನೆ ಹಿಂದುಳಿದ ವರ್ಗದ ಲೇಬಲ್ ಹಚ್ಚಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.