ಹುನಗುಂದ: ತಮ್ಮ ಛಲ ಮತ್ತು ಹಠದ ಸ್ವಭಾವದಿಂದ ರಾಜಕೀಯದಲ್ಲಿ ಸೋಲರಿಯದ ರಾಜಕಾರಣಿ ದಿ.ಎಸ್.ಆರ್. ಕಾಶಪ್ಪನವರ, ತಮ್ಮ ವೈರಿಗಳನ್ನು ತುಂಬು ಪ್ರೀತಿಯಿಂದ ಕಾಣುತ್ತಿದ್ದ ಅವರು ಸ್ವಪ್ರಯತ್ನದಿಂದಲೇ ಜಿಲ್ಲೆ ಮತ್ತು ರಾಜ್ಯದಲ್ಲಿ ತಮ್ಮ ರಾಜಕೀಯ ಭವಿಷ್ಯ ಸೃಷ್ಟಿಸಿಕೊಂಡವರು.
ಸಾಧಾರಣ ರೈತರಾಗಿದ್ದ ಕಾಶಪ್ಪನವರ, ಕೃಷ್ಣಾನದಿ ಹೊಳೆಸಾಲ ಸಣ್ಣ ಹಳ್ಳಿ ಹಾವರಗಿಯಲ್ಲಿ ರಾಜಕೀಯ ಆರಂಭಿಸಿ, ಮೊದಲ ಬಾರಿಗೆ ತಾಲ್ಲೂಕು ಅಭಿವೃದ್ಧಿ ಮಂಡಳಿ(ಟಿಡಿಬಿ) ಸದಸ್ಯರಾಗಿ ಗೆದ್ದು ಅಧ್ಯಕ್ಷರಾದರು.
ನಂತರದ ಅವರ ರಾಜಕೀಯ ನಡೆ ಬೆರಗು ಮೂಡಿಸುತ್ತದೆ. 1985ರಲ್ಲಿ ಶಿವಸಂಗಪ್ಪ ಕಡಪಟ್ಟಿ ಅವರ ಎದುರು ಪರಾಭವಗೊಂಡರೂ ಛಲಬಿಡದೇ ಪಕ್ಷ ಸಂಘಟಿಸಿ 1989ರಲ್ಲಿ ಅತ್ಯಧಿಕ ಮತಗಳಿಂದ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. ಆಮೇಲೆ ರಾಜ್ಯದ ಕ್ಯಾಬಿನೆಟ್ ಮಂತ್ರಿ ಹುದ್ದೆಯವರೆಗೆ ಸಾಗಿದ್ದರೂ ಹಮ್ಮು ಬಿಮ್ಮಿಲ್ಲದ ಸರಳ ರಾಜಕಾರಣಿ ಅವರಾಗಿದ್ದರು.
ಸಚಿವರಾಗಿ ಬಂದಾಗ ಅವರ ಸರ್ಕಾರಿ ವಾಹನ ಕಾಂಟೆಸ್ಸಾ ಕಾರಿನಲ್ಲಿ ಜನಸಾಮಾನ್ಯರನ್ನೂ ಕೂಡಿಸಿ ಖುಷಿಪಡಿಸುತ್ತಿದ್ದರು. ಈ ಸಂದರ್ಭಗಳಲ್ಲಿ ತುಂಬಾ ಆತ್ಮೀಯರು 'ಸರ್ ಸರ್ಕಾರದ ಶಿಷ್ಟಾಚಾರ ಮುರಿಯುತ್ತೀರಿ’ ಎಂದರೆ, ‘ನಾನೇ ಸರ್ಕಾರ’ ಎಂದು ಧೈರ್ಯದ ಮಾತು ಹೇಳುತ್ತಿದ್ದರು. ಮೂರು ಬಾರಿ ಹೃದಯದ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಾಗಲೂ ಜೀವದ ಬಗ್ಗೆ ಹೆದರಲಿಲ್ಲ. ಬದುಕಿಗಿಂತ ಸಾಧನೆ ಮುಖ್ಯ ಎಂದು ತಿಳಿದಿದ್ದರು.
ಮರೋಳ ಏತನೀರಾವರಿ, ಕೂಡಲಸಂಗಮ ಅಭಿವೃದ್ಧಿ, ಅಲ್ಲಿನ ಜಿಟಿಟಿಸಿ ಕಾಲೇಜು ಸ್ಥಾಪನೆ. ಪ್ರೌಢಶಾಲೆ, ಪಶುಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಶಾಲಾಕೋಣೆ ನಿರ್ಮಾಣ, ರಸ್ತೆ ಅಭಿವೃದ್ಧಿ ವಿವಿಧ ಯೋಜನೆಯಲ್ಲಿ ಸಾವಿರಾರು ಮನೆಗಳ ನಿರ್ಮಾಣ. ಹುನಗುಂದದಲ್ಲಿ ತಾಲ್ಲೂಕು ಕ್ರೀಡಾಂಗಣ, ಇಳಕಲ್ ಡೈಟ್ ಆರಂಭ ಮುಂತಾದ ಕಾರ್ಯಗಳಿಗೆ ನೂರಾರು ಕೋಟಿ ಅನುದಾನ ತಂದು ಇಡೀ ಮತಕ್ಷೇತ್ರದ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದರು.
‘ಕಾಶಪ್ಪನವರ ಜಾತಿ ರಾಜಕಾರಣ ಮಾಡುತ್ತಾರೆ’ ಎಂಬ ಕೆಲವರ ಮಾತಿಗೆ ನೇರವಾಗಿ, ‘ಇದನ್ನು ಮಾಡದವರು ಯಾರು?' ಎಂದು ಮರು ಉತ್ತರ ಕೊಟ್ಟಿದ್ದರು. ಲಿಂಗಾಯತರ ಸಮಗ್ರ ಸಂಘಟನೆಯ ಒಳ ಆಶಯ ಸದಾ ಅವರಲ್ಲಿ ಜಾಗೃತವಾಗಿತ್ತು, ಪಂಚಮಸಾಲಿ ಸಮುದಾಯದ ಸಂಘಟನೆ ಗಟ್ಟಿಗೊಳಿಸಿ ಪಂಚಮಸಾಲಿಗಳಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.