ADVERTISEMENT

ಪ್ರಜಾತಂತ್ರದಲ್ಲಿ ಚರ್ಚೆ ಇರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಗ್ರಂಥಾಲಯ ತಜ್ಞ ಎಸ್‌.ಆರ್‌. ಗುಂಜಾಳರಿಗೆ ‘ಬಸವ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 22:43 IST
Last Updated 30 ಏಪ್ರಿಲ್ 2025, 22:43 IST
   

ಬಾಗಲಕೋಟೆ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ಇರುತ್ತದೆ. ಆದರೆ, ‘ಮನ್ ಕೀ ಬಾತ್’ನಲ್ಲಿ‌ ಕೇಳುವುದಷ್ಟೇ ಅವಕಾಶ ಹೇಳಲಿಕ್ಕೆ ಆಗುವುದಿಲ್ಲ. ಯಾವತ್ತೂ ಜನರ ಧ್ವನಿ ಕೇಳಿಲ್ಲ. ಏನು ಹೇಳುತ್ತಾರೋ ಅದನ್ನು ಕೇಳಬೇಕು. ಅದು ಸರ್ವಾಧಿಕಾರಿ ಧೋರಣೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಕೂಡಲಸಂಗಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ನಾಯಕ ಬಸವ ಜಯಂತಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಅನುಭವ ಮಂಟಪ ಬಸವಾದಿ ಶರಣರ ವೈಭವದಲ್ಲಿ ₹10 ಲಕ್ಷ ನಗದು ಹೊಂದಿದ ‘ಬಸವ ರಾಷ್ಟ್ರೀಯ ಪ್ರಶಸ್ತಿ’ಯನ್ನು ಸಾಹಿತಿ, ಗ್ರಂಥಾಲಯ ತಜ್ಞ ಎಸ್‌.ಆರ್‌. ಗುಂಜಾಳ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ಚರ್ಚೆಗಳಿರುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

‘ಕಂದಾಚಾರ, ಮೌಢ್ಯಗಳು ಹೋಗಿ ಸಮ ಸಮಾಜ ನಿರ್ಮಾಣ ಆಗಬೇಕು. ಆದರೆ, ಒಂಬತ್ತು ಶತಮಾನಗಳಾದರೂ ಸಮ ಸಮಾಜ ನಿರ್ಮಾಣವಾಗಿಲ್ಲ. ರಾಜಕೀಯ ಪ್ರಜಾಪ್ರಭುತ್ವ ಸಿಕ್ಕಿದೆ. ಆರ್ಥಿಕ, ಸಾಮಾಜಿಕವಾಗಿ ಸ್ವಾತಂತ್ರ್ಯ ಸಿಕ್ಕಿಲ್ಲ. ಹಿಂದಿನ ಜನ್ಮದ ಪಾಪದ ಫಲ, ಹಣೆಬರಹ ಎಂಬ ಕರ್ಮ ಸಿದ್ಧಾಂತದ ಮೂಲಕ ಪಟ್ಟಭದ್ರ ಹಿತಾಸಕ್ತಿಗಳು ಕಟ್ಟಿ ಹಾಕಿವೆ. ಅದನ್ನು ನಂಬುವುದಿಲ್ಲ ಎಂದು ಶಪಥ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ವಿತರಣೆ. ಇವುಗಳನ್ನು ಪ್ರತಿಯೊಬ್ಬರೂ ಮಾಡಿದಾಗಲೇ‌ ಸಮಾನತೆ ಸಾಧ್ಯ’ ಎಂದು ಹೇಳಿದ ಸಿದ್ದರಾಮಯ್ಯ, ‘ಬಸವ ಕಲ್ಯಾಣದಲ್ಲಿ ₹700 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪವನ್ನು ಇದೇ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು.  ಬಸವಣ್ಣ, ನೀಲಾಂಬಿಕೆ ಮೂರ್ತಿ ನಿರ್ಮಾಣ, ತರಿಕೆರೆಯಲ್ಲಿ ಅಕ್ಕನಾಗಲಾಂಬಿಕೆ, ತಿಗಡಿಯಲ್ಲಿ ಕಲ್ಯಾಣಮ್ಮನವರ ಐಕ್ಯ ಸ್ಥಳ ಅಭಿವೃದ್ಧಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.