
ಬಾಗಲಕೋಟೆ: ಕಬ್ಬು ಬೆಳೆಗಾರರಿಗೆ ಮಾರಕವಾಗಿರುವ ಎಫ್‌ಆರ್‌ಪಿ ಬೆಲೆ ನಿಗದಿ ಮರುಪರಿಶೀಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಒತ್ತಾಯಿಸಿದ್ದಾರೆ.
ಶೇ9.5 ಇಳುವರಿಗೆ ಇದ್ದ ಎಫ್‌ಆರ್‌ಪಿ ನಿಗದಿಯನ್ನು ಶೇ10.25ರಷ್ಟಕ್ಕೆ ಹೆಚ್ಚಿಸಿರುವುದು ಅವೈಜ್ಞಾನಿಕವಾಗಿದ್ದು, ರೈತರ ಹಿತಾಸಕ್ತಿ ಮಾರಕವಾಗಿದೆ. ಇದರಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಹಿಂದಿನ ಇಳುವರಿಯನ್ನೇ ಪರಿಗಣಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.
ಎಥೆನಾಲ್ ಕೋಟಾ ಹಂಚಿಕೆಯಲ್ಲೂ ಗಮನಾರ್ಹ ವ್ಯತ್ಯಾಸವಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಶೇ12.4 ಮತ್ತು ಉತ್ತರ ಪ್ರದೇಶ ರಾಜ್ಯಕ್ಕೆ ಶೇ15.3 ರಷ್ಟಿದೆ, ಕರ್ನಾಟಕಕ್ಕೆ ಶೇ11.1ರಷ್ಟಿದ್ದು, ಬೇರೆ ರಾಜ್ಯಗಳಿಗೆ ಹೆಚ್ಚಿದ್ದು, ಕರ್ನಾಟಕಕ್ಕೆ ಕಡಿಮೆ ಇದೆ. ಈ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಂತರರಾಷ್ಟ್ರೀಯ ಸಕ್ಕರೆ ಮಾರುಕಟ್ಟೆ ಮತ್ತು ವಿತರಣೆ ಗಮನದಲ್ಲಿಟ್ಟುಕೊಂಡು ಸರ್ಕಾರವು ಕಬ್ಬಿನ ಉತ್ಪಾದನೆ, ಸಂಗ್ರಹಣೆ ಮಾರುಕಟ್ಟೆ ಮತ್ತು ಬೆಲೆಯ ವಿವಿಧ ಅಂಶಗಳನ್ನು ಪರಿಗಣಿಸಿ ಸಕ್ಕರೆ ರಫ್ತು ನೀತಿಯನ್ನು ಬದಲಾಯಿಸಬೇಕು. ಗೃಹ ಬಳಕೆ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಕ್ಕರೆಗೆ ಪ್ರತ್ಯೇಕ ದರ ನಿಗದಿ ಮಾಡಬೇಕು ಎಂದು ರೈತರ ಆಗ್ರಹವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಮೂಲಕ ರಾಜ್ಯದ ರೈತರ ಹಿತಾಸಕ್ತಿ ಕಾಪಾಡಬೇಕು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.