ADVERTISEMENT

ಪಿಎಚ್‌ಡಿ: ಗಿನ್ನಿಸ್‌ ದಾಖಲೆ ಸೇರಿದೆ ಈ ಕುಟುಂಬ!

ಭಂಟನೂರಿನ ಸೊನ್ನದ ಕುಟುಂಬದ ಏಳು ಮಂದಿ ಸದಸ್ಯರಿಗೆ ಡಾಕ್ಟರೇಟ್

ವೆಂಕಟೇಶ ಜಿ.ಎಚ್.
Published 22 ಅಕ್ಟೋಬರ್ 2020, 10:41 IST
Last Updated 22 ಅಕ್ಟೋಬರ್ 2020, 10:41 IST
ಮುಧೋಳ ತಾಲ್ಲೂಕು ಭಂಟನೂರಿನ ರಾಮಣ್ಣ ಸೊನ್ನದ ಕುಟುಂಬದ ಅಪರೂಪದ ಚಿತ್ರ
ಮುಧೋಳ ತಾಲ್ಲೂಕು ಭಂಟನೂರಿನ ರಾಮಣ್ಣ ಸೊನ್ನದ ಕುಟುಂಬದ ಅಪರೂಪದ ಚಿತ್ರ   

ಬಾಗಲಕೋಟೆ: ಡಾಕ್ಟರೇಟ್, ಗೌರವ ಡಾಕ್ಟರೇಟ್‌ ಪಡೆಯುವ ಸಂಗತಿ ಇಂದು ದಾರಿ–ಅಡ್ಡದಾರಿಗಳ ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದೆ.ಈ ದಿನಮಾನದಲ್ಲಿ ಮುಧೋಳ ತಾಲ್ಲೂಕಿನ ಭಂಟನೂರಿನ ಸೊನ್ನದ ಕುಟುಂಬ ಡಾಕ್ಟರೇಟ್ (ಪಿಎಚ್‌ಡಿ ಪದವಿ) ವಿಚಾರದಲ್ಲಿ ವಿಶ್ವದಾಖಲೆಗೆ ಪಾತ್ರರಾಗಿರುವ ಸಂಗತಿ ಸ್ಮರಣಾರ್ಹ.

’ಒಂದೇ ಕುಟುಂಬದಲ್ಲಿ ಅತಿ ಹೆಚ್ಚು ಮಂದಿ ಡಾಕ್ಟರೇಟ್ ಪಡೆದು ಗಿನ್ನಿಸ್ ದಾಖಲೆ ಮಾಡಿದವರು‘ ಎಂಬ ವಿವರಕ್ಕೆ ನೀವು ಗೂಗಲ್‌ನಲ್ಲಿ‌ ಸರ್ಚ್‌ ಕೊಟ್ಟರೆ ಭಂಟನೂರಿನ ಸೊನ್ನದ ಕುಟುಂಬದ ಹೆಸರು ಒಡಮೂಡುತ್ತದೆ.

ಭಂಟನೂರಿನ ರಾಮಣ್ಣ ಸೊನ್ನದ ಹಾಗೂ ಪಾರ್ವತಿ ಬಾಯಿ ದಂಪತಿ 12 ಮಂದಿ ಮಕ್ಕಳಲ್ಲಿ(ತಲಾ ಆರು ಮಂದಿ ಗಂಡು ಹಾಗೂ ಹೆಣ್ಣು ಮಕ್ಕಳು) ಏಳು ಮಂದಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಅವರಲ್ಲಿ ಮೂವರು ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳಿಂದ ಈ ಶ್ರೇಯ ಪಡೆದಿದ್ದರೆ ನಾಲ್ವರು ತಾಯ್ನಾಡಿನಲ್ಲಿ ಈ ಮನ್ನಣೆಗೆ ಪಾತ್ರರಾಗಿದ್ದಾರೆ. 1970ರಿಂದ 1994ರವರೆಗೆ 24 ವರ್ಷಗಳ ಅವಧಿಯಲ್ಲಿ ಸೊನ್ನದ ಕುಟುಂಬದ ಈ ಏಳು ಮಂದಿ ಪಿಎಚ್‌ಡಿ ಮಾಡಿದ್ದಾರೆ. ವಿಶೇಷವೆಂದರೆ ಎಲ್ಲರೂ ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ.

ADVERTISEMENT

ಮುಧೋಳ ಸಂಸ್ಥಾನದ ಮಾಲೋಜಿರಾವ್ ಘೋರ್ಪಡೆ ಮಹಾರಾಜರ ಸಂಪುಟದಲ್ಲಿರಾಮಣ್ಣ ಸೊನ್ನದ ಶಿಕ್ಷಣ ಹಾಗೂ ಆರೋಗ್ಯ ಸಚಿವರಾಗಿದ್ದರು. ಕಠಿಣ ದುಡಿಮೆ ಹಾಗೂಶಿಸ್ತುಬದ್ಧ ಬದುಕನ್ನು ರೂಢಿಸಿಕೊಂಡಿದ್ದ ರಾಮಣ್ಣ ತಮ್ಮ ಮಕ್ಕಳನ್ನೂ ಅದೇ ಹಾದಿಯಲ್ಲಿ ಬೆಳೆಸಿದ್ದರು. ಎಲ್ಲರಿಗೂ ಉನ್ನತ ಶಿಕ್ಷಣ ಕೊಡಿಸಬೇಕು ಎಂಬ ಅವರ ಕನಸನ್ನು ಮಕ್ಕಳು ಅಕ್ಷರಶಃ ಸಾಕಾರಗೊಳಿಸಿದರು. ಅದರ ಫಲವಾಗಿ ಸೊನ್ನದ ಕುಟುಂಬದ ಸುಭಾಷ್, ಜಗದೀಶ, ವಿಜಯ್, ಹೇಮಾ, ಲಕ್ಷ್ಮೀಬಾಯಿ, ಕಸ್ತೂರಿ ಹಾಗೂ ನಳಿನಿ ಪಿಎಚ್‌ಡಿ ಪದವಿ ಗಳಿಸಿದ್ದಾರೆ.

ಚಿನ್ನದ ಹಬ್ಬದ ಸಂಭ್ರಮ:ಸೊನ್ನದ ಕುಟುಂಬದಲ್ಲಿ ಮೊದಲು ಡಾಕ್ಟರೇಟ್ ಪದವಿ ಪಡೆದ ಸುಭಾಷ್ ಸೊನ್ನದ ಆಗಸ್ಟ್ 18, 1970ರಲ್ಲಿ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಹೀಗಾಗಿ ಅವರಿಗೆ ಪಿಎಚ್‌ಡಿ ಗರಿಮೆ ಮೂಡಿ ಇಲ್ಲಿಗೆ ಬರೋಬ್ಬರಿ 50 ವರ್ಷ ಸಂದಿದೆ. ಸಮಾಜಶಾಸ್ತ್ರದಲ್ಲಿ ಅಮೆರಿಕದ ವಿಸ್ಕಾನ್‌ಸಿನ್ (wisconsin) ವಿವಿಯಿಂದ ಅವರು ಪಿಎಚ್‌ಡಿ ಪಡೆದಿದ್ದರು. ಅಮೆರಿಕದಲ್ಲಿ ಪ್ರಾಧ್ಯಾಪಕರಾಗಿ ದುಡಿದು ಅಲ್ಲಿಯೇ ನಿವೃತ್ತಿ ಬದುಕು ಕಳೆಯುತ್ತಿರುವ ಅವರಿಗೆ ಈಗ 89 ವರ್ಷ.

ಭೂಗರ್ಭಶಾಸ್ತ್ರದಲ್ಲಿ (ಜಿಯಾಲಜಿ) ಪಿಎಚ್‌ಡಿ ಪಡೆದಿರುವ ಜಗದೀಶ ಸೊನ್ನದ ಐಐಟಿ ಖರಗಪುರದಲ್ಲಿ ಎಂಟೆಕ್ ಹಾಗೂ ಎಂಎಸ್ ಮುಗಿಸಿದ್ದರು. 1971ರ ಆಗಸ್ಟ್ 21ರಂದು ಅಮೆರಿಕದ ಟೆಕ್ಸಾಸ್‌ನ ಎಂ ಅಂಡ್ ಎಂ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆದಿದ್ದರು. ಮುಂದೆ ಅಲ್ಲಿನ ಟೆಕ್ಸಾಸ್‌ನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿ ನಿವೃತ್ತಿ ಆಗಿರುವ ಅವರೀಗ ಅಲ್ಲಿಯೇ ನೆಲೆಸಿದ್ದಾರೆ.

ಏರೊನಾಟಿಕಲ್‌ ಎಂಜಿನಿಯರಿಂಗ್ ವಿಷಯದಲ್ಲಿ ಮುಂಬೈ ಐಐಟಿಯಿಂದ ಪದವಿ ಪಡೆದ ವಿಜಯ್ ಸೊನ್ನದ ಮುಂದೆ ಎಂಎಸ್ ಮುಗಿಸಿದ್ದರು. ಅಮೆರಿಕದ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 1984ರ ಜೂನ್ 4ರಂದು ಪಿಎಚ್‌ಡಿ ಪಡೆದಿದ್ದರು.ನಂತರ ಅಲ್ಲಿಯೇ ಏರೊಸ್ಪೇಸ್ ಡಿಸೈನಿಂಗ್ ಕಂಪೆನಿಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ವಿಜಯ್ ಅಮೆರಿಕದ ಯುವತಿಯನ್ನೇ ಮದುವೆ ಆಗಿದ್ದು, ಅಲ್ಲಿಯ ಪೌರತ್ವ ಪಡೆದಿದ್ದಾರೆ.

ಮದುವೆ ನಂತರ ಹೇಮಲತಾ ಶಿವನಗೌಡ ಪಾಟೀಲ ಆಗಿ ತಮ್ಮ ವಿಳಾಸ ಬದಲಾಯಿಸಿಕೊಂಡಿರುವ ಹೇಮ ಸೊನ್ನದ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ 1980ರ ಡಿಸೆಂಬರ್ 3ರಂದು ಪಿಎಚ್‌ಡಿ ಪಡೆದಿದ್ದಾರೆ. ಅವರ ಪತಿ ಶಿವನಗೌಡ ಪಾಟೀಲ ಮುಂಬೈನಲ್ಲಿ ಮ್ಯಾಜಿಸ್ಟ್ರೇಟ್ ಆಗಿ ನಿವೃತ್ತರಾಗಿದ್ದಾರೆ. ಹೇಮಾ ಹಾಗೂ ಶಿವನಗೌಡ ದಂಪತಿಗೆ ಆರು ಮಂದಿ ಮಕ್ಕಳು. ಮಗಳ ಜೊತೆ ಕಾಲೇಜಿಗೆ ತೆರಳಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಮುಗಿಸಿದ ಶ್ರೇಯ ಹೇಮಾ ಅವರದ್ದು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಫೆಬ್ರುವರಿ 14, 1981ರಲ್ಲಿ ಮನಃಶಾಸ್ತ್ರ ವಿಷಯದಲ್ಲಿ ನಳಿನಿ ಸೊನ್ನದ ಪಿಎಚ್‌ಡಿ ಪಡೆದಿದ್ದಾರೆ. ಕೆಲಕಾಲ ಅಲ್ಲಿಯೇ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದ್ದರು. ಅಮೆರಿಕದಲ್ಲಿ ಎಂಜಿನಿಯರ್ ಆಗಿರುವ ಜಮಖಂಡಿ ತಾಲ್ಲೂಕು ತುಂಗಳ ಗ್ರಾಮದ ತಿಮ್ಮಣ್ಣ ಹೊಸೂರ ಅವರನ್ನು ವರಿಸಿದ ಮೇಲೆ ಕೆಲಸ ಬಿಟ್ಟು ಅಲ್ಲಿಗೆ ವಾಸ್ತವ್ಯ ಬದಲಿಸಿದ್ದಾರೆ.

ಗುಜರಾತ್‌ನ ವೈದ್ಯ ಡಾ.ಹೇಮಂತ್ ಕೇಸರಿವಾಲಾ ಅವರನ್ನು ಮದುವೆಯಾಗಿದ್ದ ರಾಮಣ್ಣ ಸೊನ್ನದ ಪುತ್ರಿ ಲಕ್ಷ್ಮೀಬಾಯಿ ಕೂಡ ವೈದ್ಯೆ. ಮುಂಬೈನ ಪ್ರತಿಷ್ಠಿತ ಗ್ರ್ಯಾಂಡ್‌ಟ್ರಂಕ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್, ಪಿಡಿಯಾಟ್ರಿಕ್ಸ್‌ನಲ್ಲಿ ಎಂಡಿ ಮುಗಿಸಿದ್ದರು. 1988ರ ಆಗಸ್ಟ್ 28ರಂದು ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. ಡಾ.ಲಕ್ಷ್ಮೀಬಾಯಿ ಪತಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ.

ಕಸ್ತೂರಿ ಸೊನ್ನದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ1994ರ ಫೆಬ್ರವರಿ 18ರಂದು ಫ್ರೆಂಚ್ ಭಾಷೆಯಲ್ಲಿ ಪಿಎಚ್‌ಡಿ ಪಡೆದಿದ್ದಾರೆ. ಅವರ ಪತಿ ತಿಮ್ಮನಗೌಡ ಆರ್. ಗೌಡರ ಕರ್ನಾಟಕ ವಿ.ವಿಯಲ್ಲಿಯೇ ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್ ಆಗಿ ನಿವೃತ್ತರಾಗಿದ್ದರು. ಮೂಲತಃ ತಿಮ್ಮನಗೌಡ ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿಯವರು. ಪತಿ ನಿಧನರಾಗಿದ್ದು, ಕಸ್ತೂರಿ ಈಗ ಮಕ್ಕಳೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.