ADVERTISEMENT

ತಿಮ್ಮಾಪುರ: ಸ್ವಚ್ಛತೆ ಮರೀಚಿಕೆ

ಸಂಗಮೇಶ ಹೂಗಾರ
Published 19 ನವೆಂಬರ್ 2025, 2:25 IST
Last Updated 19 ನವೆಂಬರ್ 2025, 2:25 IST
ಹುನಗುಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಪೂರೈಸುವ ಬಾವಿಯಲ್ಲಿ ಕಸ ಕಡ್ಡಿ ಬಿದ್ದಿದೆ
ಹುನಗುಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಪೂರೈಸುವ ಬಾವಿಯಲ್ಲಿ ಕಸ ಕಡ್ಡಿ ಬಿದ್ದಿದೆ   

ಹುನಗುಂದ : ತಾಲ್ಲೂಕಿನ ಅಮರಾವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ತಿಮ್ಮಾಪೂರ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಅವ್ಯವಸ್ಥೆ ಆಗರವಾಗಿದೆ.

ಗ್ರಾಮದ ಪ್ರಮುಖ ಚರಂಡಿಗಳು ಹೂಳು ತುಂಬಿಕೊಂಡು ದುರ್ನಾತ ಬೀರುತ್ತಿವೆ. ಗ್ರಾಮದ ಕೆಲವೆಡೆ ಸಿಸಿ ರಸ್ತೆ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಮೇಲೆ ನೀರು ಹರಿಯುತ್ತಿದೆ. ಕೆಲವೆಡೆ ಚರಂಡಿ ಸುತ್ತಮುತ್ತ ಕಸ ಕಡ್ಡಿ, ಕಳೆ ಗಿಡಗಳು ಆವರಿಸಿವೆ.

ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹಳೆಯದಾದ ತೆರೆದ ಬಾವಿಯಿಂದ ನೀರು ಪೂರೈಕೆಯಾಗುತ್ತಿದೆ. ಆದರೆ ನೀರು ಪೂರೈಕೆ ಆಗುವ ಬಾವಿಯಲ್ಲಿ ಕಸ ಕಡ್ಡಿ ಆವರಿಸಿದೆ. ಜೊತೆಗೆ ಬಾವಿ ಕಟ್ಟಡದಲ್ಲಿ ಅಲ್ಲಲ್ಲಿ ಗಿಡಗಳು ಬೆಳೆದಿದ್ದರೂ ಸ್ವಚ್ಛತೆಗೆ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ADVERTISEMENT

ಹುನಗುಂದದಿಂದ ಗ್ರಾಮಕ್ಕೆ ಸಂಪರ್ಕಿಸುವ ಎರಡು ರಸ್ತೆ ಮಾರ್ಗಗಳು ತೀರಾ ಹದಗೆಟ್ಟಿದ್ದು, ತಗ್ಗು ಗುಂಡಿಗಳಿಂದ ಕೂಡಿವೆ. ಹೀಗಾಗಿ ಇದೇ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಹಾಗೂ ಸಣ್ಣ ಪುಟ್ಟ ವಾಹನ ಸವಾರರು ಪರದಾಡುವಂತಾಗಿದೆ.

ಗ್ರಾಮದಲ್ಲಿರುವ ಬಸ್ ತಂಗುದಾಣದ ಕಟ್ಟಡ ಶಿಥಿಲಾವಸ್ಥೆಯಿಂದ ಕೂಡಿದ್ದು, ಇಸ್ಪೀಟ್ ಆಟ ಮತ್ತು ಮದ್ಯಪ್ರಿಯರ ತಾಣವಾಗಿ ಮಾರ್ಪಟ್ಟಿದೆ.  ಪಟ್ಟಣಕ್ಕೆ ಶಾಲಾ ಕಾಲೇಜು ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ನಿತ್ಯ ಹೋಗುವವರು ರಸ್ತೆಯಲ್ಲಿ ನಿಲ್ಲಬೇಕಾಗಿದೆ. ಗ್ರಾಮದ ಅಗಸಿ ಹತ್ತಿರವಿರುವ ಹಳೆಯ ಶಾಲಾ ಕಟ್ಟಡದ ಹಿಂಬದಿಯಲ್ಲಿ ಚರಂಡಿ ನೀರು ನಿಂತು ದುರ್ವಾಸನೆ ಬೀರುತ್ತಿದೆ.

ಬಳಕೆಯಾಗದ ಸಮುದಾಯ ಶೌಚಾಲಯ: ಗ್ರಾಮ ಪಂಚಾಯ್ತಿ ವತಿಯಿಂದ ನರೇಗಾ ಯೋಜನೆ ಅಡಿ ಗ್ರಾಮದಲ್ಲಿ 2018-19ರಲ್ಲಿ ಅಂದಾಜು ₹3.30 ಲಕ್ಷ ವೆಚ್ಚದಲ್ಲಿ ಪುರುಷ ಮತ್ತು ಮಹಿಳೆಯರ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಶೌಚಾಲಯ ನಿರ್ಮಿಸಿ 6-7 ವರ್ಷಗಳು ಗತಿಸಿದರೂ ಅದು ಈ ವರೆಗೂ ಬಳಕೆ ಆಗಿಲ್ಲ. ಶೌಚಾಲಯಕ್ಕೆ ಅಳವಡಿಸಿದ್ದ ನೀರಿನ ಟ್ಯಾಂಕ್, ಕಳುವಾಗಿದೆ. ಕೊಠಡಿಗಳಲ್ಲಿನ ಬಾಗಿಲು ಮುರಿದು ಹೋಗಿವೆ. ಹೀಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಶೌಚಾಲಯ ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿದೆ. ಗ್ರಾಮವನ್ನು 2018ರಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಗಿದೆ. ಆದರೆ ಇದು ಘೋಷಣೆಗಷ್ಟೆ ಸೀಮಿತವಾಗಿದೆ. ರಸ್ತೆ ಬದಿಯಲ್ಲಿ ಬಯಲು ಶೌಚಾಲಯ ಮುಂದುವರೆದಿದೆ.

ಚರಂಡಿಗಳು ಕೆಲವೆಡೆ ಹೂಳು ತುಂಬಿಕೊಂಡು ದುರ್ನಾತ ಬೀರುತ್ತಿವೆ. ಕ್ರಿಮಿ ಕೀಟಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಬೇಕು. ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು
ಬಸವರಾಜ, ಗ್ರಾಮಸ್ಥ ತಿಮ್ಮಾಪೂರ
ನರೇಗಾ ಕ್ರಿಯಾಯೋಜನೆಯಲ್ಲಿ ಗ್ರಾಮದ ನೈರ್ಮಲೀಕರಣ (ಸ್ವಚ್ಛತೆ) ಜೊತೆಗೆ ಸಮುದಾಯದ ಶೌಚಾಲಯದ ಕಾಮಗಾರಿ ಕೈಗೊಂಡು ಆರಂಭಿಸಲಾಗುವುದು.
ಶಿಲ್ಪಾ ರ್ಯಾಕಿ , ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಅಮರಾವತಿ
ಹುನಗುಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಚರಂಡಿಯಲ್ಲಿ ಹೂಳು ತುಂಬಿದೆ
ಹುನಗುಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಿರ್ಮಿಸಿರುವ ಸಮುದಾಯ ಶೌಚಾಲಯ ಬಳಕೆಯಾಗದೆ ಹಾಳಾಗಿದೆ
ಹುನಗುಂದ ತಾಲ್ಲೂಕಿನ ತಿಮ್ಮಾಪೂರ ಗ್ರಾಮದ ಚರಂಡಿಯಲ್ಲಿ ಹೂಳು ತುಂಬಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.