ಬಾಗಲಕೋಟೆ: ಕಾಯಕದಲ್ಲಿ ಮೇಲು–ಕೀಳಿಲ್ಲ. ಜಾತಿ ವ್ಯವಸ್ಥೆ ಸಾಮಾಜಿಕ ಅನಿಷ್ಟವಾಗಿದೆ. ಆರ್ಥಿಕ, ಸಾಮಾಜಿಕ ಸಮಾನತೆ ಸಾಧನೆಯಿಂದ ಜಾತಿ ವ್ಯವಸ್ಥೆ ನಿರ್ಮೂಲನೆಯಾಗುತ್ತದೆ ಎಂದು ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಬುಧವಾರ ಬಾಗಲಕೋಟೆಯ ಕಲಾಭವನದಲ್ಲಿ ಬಸವ ಸಂಸ್ಕೃತಿ ಅಭಿಯಾನ ಅಂಗವಾಗಿ ನಡೆದ ‘ಸಂವಾದ’ದಲ್ಲಿ ಮಾತನಾಡಿದ ಅವರು, ಜಾತಿ ಭೇದ ಹೊಡೆದು ಹಾಕಲು ಬಸವಣ್ಣ ಶ್ರಮಿಸಿದ್ದರು. ಮೀಸಲಾತಿಗಾಗಿ ಜಾತಿ ಮುಂದುವರೆದಿದೆ. ಅದರ ನಿರ್ಮೂಲನೆಗೆ ಎಲ್ಲರೂ ಶ್ರಮಿಸಬೇಕು ಎಂದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಣ್ಣ ನೀಡಿದ ಇಷ್ಟಲಿಂಗ ಪೂಜೆ ಮಾಡಬೇಕು. ಅದರೊಂದಿಗೆ ಧರ್ಮಗುರು ಬಸವಣ್ಣನಿಗೂ ಗೌರವ ಸೂಚಕವಾಗಿ ಪೂಜೆ ಸಲ್ಲಿಸಿದರೆ ತಪ್ಪೇನಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೆವ್ವ, ಭೂತ ಇಲ್ಲ. ಅದೊಂದು ಸುಳ್ಳು ಕಲ್ಪನೆ. ಕೆಲವರು ಮೂಢನಂಬಿಕೆಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಾರೆ. ಮಾನಸಿಕ ಕಾಯಿಲೆಯಾಗಿದೆ ಎಂದರು.
‘ಬಸವಣ್ಣನವರು ದಯವೇ ಧರ್ಮದ ಮೂಲ ಎಂದಿದ್ದಾರೆ. ಎಲ್ಲರಿಗೂ ಲೇಸನೇ ಬಯಸಿದ್ದಾರೆ. ಗೋ ಹತ್ಯೆ ನಿಲ್ಲಿಸಲು ಧ್ವನಿ ಎತ್ತಬೇಕು. ಆಗಲೇ ನಿಲ್ಲುತ್ತದೆ ಎಂದು ಹೇಳಿದರು.
ವಿಧವೆ ಹೆಣ್ಣು ಮಕ್ಕಳನ್ನು ಕೀಳಾಗಿ ಕಾಣುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿಡಸೋಶಿ ಸಿದ್ದ ಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಪರಿವರ್ತನೆಗೆ ಮುಂದಾಗುವ ಅವಶ್ಯಕತೆ ಇದೆ. ಹೇಳುವುದಕ್ಕಿಂತ ಕೃತಿಯಲ್ಲಿ ಜಾರಿಗೆ ತರಬೇಕು. ಹಲವು ಮೂಢನಂಬಿಕೆಗಳ ನಿವಾರಣೆ ಮಾಡಿದ್ದೇವೆ. ಮಹಿಳೆಯರೂ ಜಾಗೃತರಾಗಬೇಕು ಎಂದರು.
ಮನುಷ್ಯರೆಲ್ಲರೂ ಒಂದು ಎನ್ನುವ ಭಾವ ಬೆಳೆಸಿಕೊಳ್ಳಬೇಕು. ವಿಧವೆಗೆ ಮದುವೆ ಮಾಡಿಸಿದ್ದೇವೆ. ನಿಮಗೆಲ್ಲ ಗೊತ್ತಾದರೆ, ಮುಂದೆ ನಮಸ್ಕಾರ ಹೇಳಿ, ಹಿಂದೆ ವಿರೋಧ ಮಾಡುತ್ತೀರಿ ಎಂದು ಹೇಳಿದರು.
ಇಳಕಲ್ ಗುರುಮಹಾಂತ ಸ್ವಾಮೀಜಿ ಮಾತನಾಡಿ, ದುಶ್ಚಟಗಳು ಬಿಡಿಸುವ ಕಾರ್ಯ ಇಂದಿಗೂ ಮುಂದುವರೆದಿದೆ. ಮೊದಲು ಇಳಕಲ್‌ನ ಹಿರಿಯ ಶ್ರೀಗಳು ಮಾತ್ರ ಮಾಡುತ್ತಿದ್ದರು. ಈಗ ಎಲ್ಲ ಸ್ವಾಮೀಜಿಗಳೂ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದರು.
ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಗುಳೇದಗುಡ್ಡದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಶಿರೂರಿನ ಬಸವಲಿಂಗ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.