ADVERTISEMENT

ಬಾಗಲಕೋಟೆ | ಪ್ರವಾಸೋದ್ಯಮ ಇಲಾಖೆ: ಬ್ಯಾಂಕ್‌ ಖಾತೆಯಲ್ಲಿದ್ದ ₹2.43 ಕೋಟಿ ನಾಪತ್ತೆ

ಐಡಿಬಿಐ ಬ್ಯಾಂಕ್‌ ಸಿಬ್ಬಂದಿ ವಿರುದ್ಧ ದೂರು

ಬಸವರಾಜ ಹವಾಲ್ದಾರ
Published 12 ಜುಲೈ 2024, 22:54 IST
Last Updated 12 ಜುಲೈ 2024, 22:54 IST

ಹಣ

ಹಣ

ಬಾಗಲಕೋಟೆ: ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಮೂರು ಖಾತೆಗಳಲ್ಲಿದ್ದ ₹2.43 ಕೋಟಿ ಹಣವನ್ನು ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಾರದೇ ತೆಗೆಯಲಾಗಿದೆ.

‘2021ರಿಂದ 2024ರವರೆಗೆ ಮೂರು ಖಾತೆಗಳಲ್ಲಿದ್ದ ಹಣವನ್ನು ಹಲವು ಬಾರಿ ಬ್ಯಾಂಕ್‌ ಅಧಿಕಾರಿಗಳು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಾರದೇ ಪಡೆದಿದ್ದಾರೆ (ವಿತ್‌ಡ್ರಾ)’ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕ ಗೋಪಾಲ ಹಿತ್ತಲಮನಿ ಅವರು ಬಾಗಲಕೋಟೆಯ ಸಿಇಎನ್‌ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹೆಸರಿನಲ್ಲಿ ಐಡಿಬಿಐ ಬ್ಯಾಂಕ್‌ನಲ್ಲಿ ಮೂರು ಖಾತೆಗಳಿವೆ. ಒಂದು ಖಾತೆಯಲ್ಲಿ ₹1.01 ಕೋಟಿ, ಎರಡನೇ ಖಾತೆಯಲ್ಲಿ ₹1.35 ಕೋಟಿ ಮತ್ತು ಮೂರನೇ ಖಾತೆಯಲ್ಲಿ ₹10.43 ಲಕ್ಷ ಹಣವಿತ್ತು. ಆದರೆ, ಈಗ ಈ ಖಾತೆಗಳಲ್ಲಿ ₹2,915 ಮಾತ್ರ ಉಳಿದಿದೆ.

‘ಮೂರು ವರ್ಷಗಳಲ್ಲಿ ಎರಡು ಖಾತೆಗಳಿಂದ 20ಕ್ಕೂ ಹೆಚ್ಚು ಸಲ ಬೇರೆ, ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ. ಇನ್ನೊಂದು ಖಾತೆಯಿಂದ ಒಂದೇ ಬಾರಿ ಹಣ ವರ್ಗಾವಣೆ ಮಾಡಲಾಗಿದೆ. ಕೆಲ ಬಾರಿ ಪ್ರವಾಸೋದ್ಯಮ ಇಲಾಖೆ ಖಾತೆಯಿಂದ ಹಣ ತೆಗೆದು, ನಂತರದಲ್ಲಿ ಜಮಾ ಕೂಡ ಮಾಡಲಾಗಿದೆ. ಆದರೆ, ಹಣ ತೆಗೆದಿದ್ದು ಮತ್ತು ಜಮಾ ಮಾಡಿದ್ದು ಯಾರು ಎಂಬುದು ನಿಗೂಢ’ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪ್ರಕರಣ ಬೆಳಕಿಗೆ ಬಂದದ್ದು ಹೇಗೆ: ಜುಲೈ 2ರಂದು ಇಲಾಖೆಯ ಖಾತೆಯೊಂದರ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆದುಕೊಳ್ಳಲಾಗಿತ್ತು. ಅದರಲ್ಲಿ ₹1.63 ಕೋಟಿ ಇದೆ ಎಂದು ನೀಡಲಾಗಿತ್ತು. ಇಲಾಖೆಗೆ ಬಂದು ನೀಡಿರುವ ಚೆಕ್‌ಗಳನ್ನು ಪರಿಶೀಲಿಸಿದಾಗ ಹಣದಲ್ಲಿ ವ್ಯತ್ಯಾಸವಿರುವುದು ಗಮನಕ್ಕೆ ಬಂದಿದೆ. ಮರುದಿನ ಬ್ಯಾಂಕಿಗೆ ಹೋಗಿ ಕ್ಲರ್ಕ್‌ ಬಳಿ ಸ್ಟೇಟ್‌ಮೆಂಟ್ ತೆಗೆಸಿದಾಗ ಆ ಖಾತೆಯಲ್ಲಿ ಕೇವಲ ₹2,915 ಇರುವುದು ಗೊತ್ತಾಗಿದೆ. ಈ ವ್ಯತ್ಯಾಸದಿಂದ ಅನುಮಾನ ಬಂದು ಪರಿಶೀಲಿಸಿದಾಗ ಪ್ರಕರಣ ಗೊತ್ತಾಗಿದೆ.

ಪ್ರವಾಸೋದ್ಯಮ ಇಲಾಖೆಯಲ್ಲಿನ ಖಾತೆಗಳಲ್ಲಿನ ಹಣ ನಾಪತ್ತೆಯಾದ ಬಗ್ಗೆ ತನಿಖೆ ನಡೆದಿದೆ. ಬ್ಯಾಂಕ್ ದಾಖಲೆ ಪರಿಶೀಲಿಸಲಾಗುವುದು

ಅಮರನಾಥ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.