ಬಾಗಲಕೋಟೆ: ಜಿಲ್ಲೆ ವಿಶ್ವವಿಖ್ಯಾತ ಪ್ರವಾಸಿ ತಾಣಗಳನ್ನು ಹೊಂದಿದೆ. ಇವುಗಳಿಗೆ ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಅವುಗಳನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಗ್ರಾಮೀಣ ಪ್ರದೇಶ ರಸ್ತೆಗಳು ಹಾಳಾಗಿವೆ.
ಬಾಗಲಕೋಟೆ ಪಟ್ಟಣದಲ್ಲಿಯೇ ರೈಲು ನಿಲ್ದಾಣದ ಬಳಿ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆಗಳು ಹಾಳಾಗಿವೆ. ಗುಂಡಿ ಬಿದ್ದ ರಸ್ತೆಗಳಲ್ಲಿಯೇ ಜನರು ತಿರುಗಾಡುವಂತಾಗಿದೆ. ಜಿಲ್ಲೆಯಲ್ಲಿಯೂ ಹಲವು ರಸ್ತೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.
ಈಚೆಗೆ ಸುರಿದ ಮಳೆಯಿಂದಾಗಿ ಮತ್ತಷ್ಟು ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ವಾಹನಗಳಲ್ಲಿ ಸಂಚರಿಸುವ ಜನರು ಪರದಾಡುವಂತಾಗಿದೆ.
ಇಳಕಲ್: ಈ ಮೊದಲೇ ಹಾಳಾಗಿದ್ದ ನಗರದ ಪ್ರಮುಖ ರಸ್ತೆಗಳು ಈಚೆಗೆ ಸುರಿದ ಮಳೆಯಿಂದಾಗಿ ಅಕ್ಷರಶಃ ಹೊಂಡಗಳಾಗಿವೆ. ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುತ್ತಿದ್ದಾರೆ.
ನಗರದ ಜೀವನಾಡಿಯಂತಿರುವ ಕಂಠಿ ವೃತ್ತದ ಸುತ್ತಲೂ ರಸ್ತೆ ಸಂಪೂರ್ಣ ಹಾಳಾಗಿದೆ. ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದವರೆಗಿನ ದ್ವಿಪಥ ರಸ್ತೆಯೂ ಹಾಳಾಗಿದೆ. ನಗರಸಭೆಯಿಂದ ಪೊಲೀಸ್ ಮೈದಾನಕ್ಕೆ ಹೋಗುವ ರಸ್ತೆಯು ಮಹಾಂತೇಶ ಚಿತ್ರಮಂದಿರದ ಹತ್ತಿರ ಸಂಪೂರ್ಣ ಗುಂಡಿಮಯವಾಗಿದೆ. ಗೊರಬಾಳ ನಾಕಾ ಹತ್ತಿರ ಹಿರೇಹಳ್ಳದ ಸೇತುವೆ ಮೇಲೆಯೂ ಗುಂಡಿಗಳು ಬಿದ್ದು, ಸಾಕಷ್ಟು ಮಳೆ ನೀರು ನಿಲ್ಲುತ್ತಿದೆ. ಸೇತುವೆ ಹಾಳಾಗುವ ಅಪಾಯವಿದೆ.
ನಗರದ ಮಧ್ಯದಲ್ಲಿ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50ರ ಸಬ್ ವೇ ಕಾರ್ಯ ನಿಧಾನಗತಿಯಲ್ಲಿ ಸಾಗಿದ್ದು, ಹೆದ್ದಾರಿಯ ಇಕ್ಕೆಲಗಳ ಬಡಾವಣೆಯ ನಾಗರಿಕರಿಗೆ ಅನಾನುಕೂಲವಾಗಿದೆ. ಹೆದ್ದಾರಿ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಬ್ಯಾರಿಕೇಡ್ ಹಾಕಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಗರಸಭೆಯಿಂದ ಪೊಲೀಸ್ ಮೈದಾನ ತಲುಪುವ ಪ್ರಮುಖ ರಸ್ತೆ ಅಲ್ಲಲ್ಲಿ ಸಂಪೂರ್ಣ ಹಾಳಾಗಿದೆ. ಕೂಡಲೇ ದುರಸ್ತಿ ಮಾಡಬೇಕು ಎಂದು ಜೆಡಿಎಸ್ ಮುಖಂಡ ಉಮೇಶ ಶಿರೂರ ಆಗ್ರಹಿಸಿದರು.
ಮಳೆ ಕಡಿಮೆಯಾದ ಕೂಡಲೇ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದರು.
ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರ ಪ್ರದೇಶದಲ್ಲಿ ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರಸಭೆ ಮತ್ತು ಅಗ್ನಿ ಶಾಮಕ ದಳದ ಕಚೇರಿ ಮುಂಭಾಗದಲ್ಲಿ ಗುಂಡಿಗಳು ನಿರ್ಮಾಣಗೊಂಡು ಆರು ತಿಂಗಳಿಗಿಂತ ಹೆಚ್ಚು ಸಮಯವಾಗಿದೆ. ಮಳೆಯಿಂದಾಗಿ ಆ ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ. ಇದರಿಂದಾಗಿ ಗುಂಡಿ ಬಿದ್ದಿರುವುದು ಗೊತ್ತಾಗದೇ ಹಲವು ವಾಹನ ಸವಾರರು, ಜನರು ಬೀಳುವಂತಾಗಿದೆ.
ಅದೇ ರೀತಿ ರಬಕವಿ–ಮಹಾಲಿಂಗಪುರ ರಸ್ತೆಯ ರಬಕವಿ ನಾಕಾದ ಬಳಿ ರಸ್ತೆಯ ಮೇಲೆ ಬಹಳಷ್ಟು ತೆಗ್ಗುಗಳು ಬಿದ್ದಿವೆ. ರಬಕವಿಯ ತೇರದಾಳ ರಸ್ತೆಯ ರಬಕವಿಯ ಬಸ್ ನಿಲ್ದಾಣದ ಬಳಿ, ಟಿಟಿಎನ್ ಪೆಟ್ರೋಲ್ ರಸ್ತೆಯ ಮುಂಭಾಗದಲ್ಲಿ ಗುಂಡಿಗಳು ಬಿದ್ದಿವೆ. ಕೆಲವು ಕಡೆಗಳಲ್ಲಿ ಗುಂಡಿಗಳಿಗೆ ಮಣ್ಣು ಹಾಕಲಾಗಿದೆ. ಇದು ಕೂಡ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದೆ.
ಬನಹಟ್ಟಿಯ ಸತ್ಕಾರ ಕಾಂಪ್ಲೆಕ್ ನಿಂದ ದುರ್ಗಾದೇವಿಯ ದೇವಸ್ತಾನದವರೆಗೂ ಸಿಸಿ ರಸ್ತೆಯಲ್ಲಿ ಕೂಡಾ ತೆಗ್ಗುಗಳಿಂದ ಜನರಿಗೆ ತೊಂದರೆಯಾಗಿದೆ.
ಪ್ರಜಾವಾಣಿ ತಂಡ: ಬಸವರಾಜ ಹವಾಲ್ದಾರ, ಎಸ್.ಎಂ. ಹಿರೇಮಠ, ಶ್ರೀಧರ ಗೌಡರ, ಬಸವರಾಜ ಅ ನಾಡಗೌಡ, ವಿಶ್ವಜ ಕಾಡದೇವರ, ಅಮರ ಇಂಗಳೆ
ಈಗಾಗಲೇ ತಗ್ಗುಗಳಿರುವ ರಸ್ತೆಗಳನ್ನು ಪರಿಶೀಲನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆಗಳ ದುರಸ್ತಿ ಕಾರ್ಯ ಆರಂಭಿಸಲಾಗುವುದುಎಸ್.ಸಿ. ಹಿರೇಮಠ ಕಿರಿಯ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಜಮಖಂಡಿ
ಪಟ್ಟದಕಲ್ಲು-ನಾಗರಾಳ ರಸ್ತೆ ಹದಗೆಟ್ಟಿದ್ದರಿಂದ ಪಟ್ಟದಕಲ್ಲಿಗೆ ಗುಳೇದಗುಡ್ಡ ಸಾರಿಗೆ ಸಂಸ್ಥೆಯ ಘಟಕದಿಂದ ಬಸ್ ಸಂಚಾರ ಸ್ಥಗಿತ ಮಾಡಲಾಗಿದೆಮುತ್ತಣ್ಣ, ತೋಟಗೇರ
ತೇರದಾಳ: ಪಟ್ಟಣದ ಮೂಲಕ ಹಾಯ್ದು ಹೋಗಿ ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳೇ ಹೆಚ್ಚಾಗಿವೆ.
ಬಸ್ ನಿಲ್ದಾಣದಿಂದ ಆರಂಭವಾದ ಗುಂಡಿಗಳು ಯಲ್ಲಮ್ಮ ದೇವಸ್ಥಾನ, ತಮದಡ್ಡಿ ನಾಕಾ, ಅಂಬೇಡ್ಕರ್ ವೃತ್ತದಿಂದ ಹುದ್ದಾರ ಪೆಟ್ರೋಲ್ ಪಂಪ್‌ವರೆಗೆ ಇವೆ. ಸುಗಮ ಸಂಚಾರಕ್ಕೆ ಇದರಿಂದ ತೊಂದರೆಯಾಗಿದೆ.
ಮಳೆಗಾಲದಲ್ಲಂತೂ ಈ ಗುಂಡಿಗಳಲ್ಲಿ ನಿಂತ ನೀರು ಜನರಿಗೆ ಕೆಸರೆರಚುತ್ತಿವೆ. ಈ ರಸ್ತೆ ಮೂಲಕ ನೆರೆಯ ಮಹಾರಾಷ್ಟ್ರ ರಾಜ್ಯದ ಹಲವು ನಗರಗಳಿಗೆ ಆಸ್ಪತ್ರೆ, ವ್ಯಾಪಾರಕ್ಕೆಂದು ತೆರಳುತ್ತಾರೆ. ಸಿಮೆಂಟ್, ಸುಣ್ಣದ ಕಲ್ಲು ಇದೇ ರಸ್ತೆಯಲ್ಲಿ ತೆಗೆದುಕೊಂಡು ಹೋಗುತ್ತದೆ.
ಶ್ರಾವಣ ಮಾಸದ ಕೊನೆಯಲ್ಲಿ ಜರುಗಿದ ಅಲ್ಲಮಪ್ರಭು ಜಾತ್ರೆಗೆಂದು ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಗುಂಡಿಗಳ ಮಧ್ಯೆ ಭಕ್ತರದ್ದು, ವಾಹನ ಸವಾರರದ್ದು ಸರ್ಕಸ್ ನಡೆಯಿತು. ಇದನ್ನು ಗಮನಿಸಿದ ಪುರಸಭೆಯು ಲೊಕೋಪಯೋಗಿ ಇಲಾಖೆಗೆ ರಸ್ತೆ ದುರಸ್ತಿ ಮಾಡುವಂತೆ ಪತ್ರ ಬರೆದಿದೆ. ಪುರಸಭೆ ಸಿಬ್ಬಂದಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿತು. ಆದರೆ ಮಳೆಗಾಲವಾದ್ದರಿಂದ ಒಂದೆರಡು ದಿನಗಳಲ್ಲಿ ಕಿತ್ತು ಹೋಯಿತು.
ಮಳೆಗಾಲಕ್ಕೂ ಮುನ್ನ ಗುಂಡಿಗಳನ್ನು ಮುಚ್ಚುವಂತೆ ಸ್ಥಳೀಯ ಅಟೊ ಚಾಲಕರು ಕೇಳಿಕೊಂಡಿದ್ದರು. ಯಾರೂ ಮುಚ್ಚದಿದ್ದಾಗ ತಾವೇ ರಸ್ತೆ ಬಳಿ ಕಲ್ಲು ಮಣ್ಣು ಹಾಕಿ ಮುಚ್ಚುವ ಕೆಲಸ ಮಾಡಿದ್ದರು.
‘ತೇರದಾಳದ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಾತ್ಸಾರವಿದೆ. ಪಟ್ಟಣ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿನ ರಸ್ತೆಗಳನ್ನು ಸುಧಾರಿಸುವ ಕೆಲಸ ಮಾಡಿಲ್ಲವೆಂದರೆ ಹೇಗೆ?’ ಎಂದು ಆಟೊ ಚಾಲಕರಾದ ರಿಯಾಜ್ ಸಂಗತ್ರಾಸ್, ದಾವೂದ್ ನಾಯಕವಾಡಿ, ಮೈನುದ್ದೀನ್ ಕೊರಬು ಆಗ್ರಹಿಸಿದರು.
ಕೂಡಲಸಂಗಮ-ಮ್ಯಾಗೇರಿ-ಆಲಮಟ್ಟಿ ಕೂಡಲಸಂಗಮದಿಂದ ಸಂಗಮ ಕ್ರಾಸ್ ರಸ್ತೆಯು ಹಾಳಾಗಿದೆ. ಗುಂಡಿಗಳು ಬಿದ್ದಿವೆ. ಮಾರ್ಚ್ ತಿಂಗಳಿನಲ್ಲಿ ಲೋಕೋಪಯೋಗಿ ಇಲಾಖೆ ದುರಸ್ತಿ ಕಾರ್ಯ ಕೈಗೊಂಡಿತು. ಆದರೆ ಸಂಪೂರ್ಣವಾಗಿ ಮಾಡಿಲ್ಲ.
ಬಾದಾಮಿ: ಐತಿಹಾಸಿಕ ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಗೆ ಬಂದ ಪ್ರವಾಸಿಗರು ಪುರಸಭೆಯನ್ನು ಶಪಿಸದೇ ಹೋಗುವಂತಿಲ್ಲ. ರಸ್ತೆಗಳು ಅಷ್ಟೊಂದು ಹಾಳಾಗಿವೆ. ಸ್ಥಳೀಯರಿಗೆ ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸಿ ರೂಢಿಯಾಗಿದೆ. ಆದರೆ ವಿದೇಶ ದೇಶದ ವಿವಿಧ ರಾಜ್ಯ ರಾಜ್ಯದ ವಿವಿಧೆಡೆಯಿಂದ ಬರುವ ಪ್ರವಾಸಿಗರು ಪರದಾಡುವಂತಾಗಿದೆ. ಪಟ್ಟಣದ ರಸ್ತೆಗಳು ಹಾಳಾಗಿ ಅನೇಕ ವರ್ಷಗಳೇ ಗತಿಸಿವೆ. ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಸಾಕಷ್ಟು ಬಾರಿ ತಿಳಿಸಿದ್ದಾರೆ. ವಿದ್ಯಾನಗರ ಚಾಲುಕ್ಯ ನಗರ ಆನಂದ ನಗರ ಗಾಂಧಿ ನಗರ ಲಕ್ಷ್ಮಿನಗರ ಟಿಪ್ಪುನಗರ ಸದಾಶಿವ ನಗರ ಹಳೇ ಬಾದಾಮಿ ಪಟ್ಟಣದ ಬಡಾವಣೆಗಳಲ್ಲಿ ಮತ್ತು ಮಾರುಕಟ್ಟೆಯ ರಸ್ತೆಯಲ್ಲಿ ಮಳೆಯಾದರೆ ನೂರಾರು ಗುಂಡಿಗಳನ್ನು ನೋಡಬಹುದಾಗಿದೆ. ಪಾದಚಾರಿಗಳು ಮತ್ತು ವಾಹನ ಚಾಲಕರು ಪ್ರಾಣವನ್ನು ಕೈಯಲ್ಲಿ ಇಟ್ಟುಕೊಂಡು ಹೋಗಬೇಕಿದೆ. ದ್ವಿಚಕ್ರ ವಾಹನ ಸವಾರರು ಅನೇಕ ಬಾರಿ ಅಪಘಾತಕ್ಕೆ ಒಳಗಾಗಿದ್ದಾರೆ. ‘ಹದಗೆಟ್ಟಿರುವ ಹಲವು ರಸ್ತೆಗಳ ದುರಸ್ತಿಗೆ 26 ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಬಾದಾಮಿ ಪುರಸಭೆ ಮುಖ್ಯಾಧಿಕಾರಿ ಬಿ.ಎಂ. ಡಾಂಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.